ಇಡಿ ವಿಚಾರಣೆಗೆ ಡಿಕೆಶಿ ಗೈರು

ಬೆಂಗಳೂರು, ನ. ೭- ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಇ.ಡಿ. ವಿಚಾರಕ್ಕೆ ಹಾಜರಾಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸಮನ್ಸ್ ನೀಡಿದ್ದು, ಅದರಂತೆ ವಿಚಾರಣೆಗೆ ದೆಹಲಿಗೆ ಹೋಗಬೇಕಿತ್ತು. ಆದರೆ ನಿನ್ನೆ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಭಿನಂದನಾ ಕಾರ್ಯಕ್ರಮ ಇತ್ತು. ಹಾಗೆಯೇ ಇಂದು ಧಾರವಾಡದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದೆ. ಹಾಗಾಗಿ ಇ.ಡಿ. ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದರು.ಸಂಸದ ಡಿ.ಕೆ. ಸುರೇಶ್ ಅವರು ಇ.ಡಿ. ವಿಚಾರಣೆಗೆ ಹಾಜರಾಗುತ್ತಾರೆ. ನಾನು ಮಾತ್ರ ಗೈರು ಹಾಜರಾಗುತ್ತಿದ್ದೇನೆ ಎಂದು ಅವರು ಹೇಳಿ ಗೈರು ಹಾಜರಿ ಬಗ್ಗೆ ಇ.ಡಿ.ಗೆ. ಇಮೇಲ್ ಮೂಲಕ ಮಾಹಿತಿ ನೀಡಿದ್ದೇನೆ. ವಿಚಾರಣೆಗೆ ಬೇರೆ ದಿನಾಂಕ ನಿಗದಿಗೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.