ಇಡಿ ಮುಂದೆ ನಾಳೆ ಸೋನಿಯಾ ಹಾಜರು

ನವದೆಹಲಿ,ಜು.೨೦- ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಾಳೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಲಿದ್ದಾರೆ. ಜಾರಿ ನಿರ್ದೇಶನಾಲಯ ನೀಡಿರುವ ನೋಟಿಸ್ ಹಿನ್ನೆಲೆಯಲ್ಲಿ ನಾಳೆ ವಿಚಾರಣೆಗೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ.
ಈ ಹಿಂದೆ ಅನಾರೋಗ್ಯದ ಕಾರಣ ನೀಡಿದ್ದ ಅವರು ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿದ್ದರು.ಹೀಗಾಗಿ ನಾಳೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಈ ಹಿಂದೆ ರಾಹುಲ್ ಗಾಂಧಿ ಕೂಡ ಇದೇ ರೀತಿ ವಿಚಾರಣೆಗೆ ಗುರಿಯಾಗಿದ್ದರು. ರಾಹುಲ್‌ಗಾಂಧಿ ಅವರನ್ನು ಜಾರಿನಿರ್ದೇಶನಾಲಯದ ಸತತ ದಿನಗಳ ಕಾಲ ವಿಚಾರಣೆಗೊಳಪಡಿಸಿತ್ತು. ಈ ೫ ದಿನ ದೆಹಲಿಯಲ್ಲಿ ಇಡಿ ಕಚೇರಿ ಮುಂದೆ ಕಾಂಗ್ರೆಸ್ಸಿಗರು ಭಾರಿ ಪ್ರತಿಭಟನೆಯನ್ನೇ ನಡೆಸಿದ್ದರು.

ನಾಳೆ ಪ್ರತಿಭಟನೆ:

ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ಅವರ ಇಡಿ ವಿಚಾರಣೆಯನ್ನು ವಿರೋಧಿಸಿ ನಾಳೆ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಆಯೋಜಿಸಿದ್ದು, ರಾಜ್ಯದಲ್ಲೂ ಕಾಂಗ್ರೆಸ್ ನಾಯಕರು ರಾಜಭವನ ಚಲೋ ನಡೆಸಲಿದ್ದಾರೆ.
ಸಂಸತ್‌ನಲ್ಲೂ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ಮುಂದಾಗಿದೆ.
ನಾಳೆ ಬೆಂಗಳೂರಿನಲ್ಲಿ ಸ್ವತಂತ್ರ ಉದ್ಯಾನವನದಿಂದ ರಾಜಭವನದವರೆಗೂ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜಭವನ ಚಲೋ ನಡೆಸಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ,