ಇಡಿ ನೋಟಿಸ್ ಖರ್ಗೆ ಆಕ್ರೋಶ

ನವದೆಹಲಿ,ಆ.೪- ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಹಾಜರಾಗುವಂತೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೋಟಿಸ್ ಜಾರಿ ಮಾಡಿರುವುದು ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿ ಸಂಸತ್ ಅಧಿವೇಶನ ನಡೆದಿರುವಾಗ ಜಾರಿನಿರ್ದೇಶನಾಲಯದವರು ಹೇಗೆ ನನ್ನನ್ನು ವಿಚಾರಣೆಗೆ ಹಾಜರಾಗುವಂತೆ ಕರೆದಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿಂದು ಪ್ರಶ್ನಿಸಿದರು.
ಇಂದು ಮಧ್ಯಾಹ್ನ ೧೨.೩೦ಕ್ಕೆ ನಾನು ಇಡಿ ಮುಂದೆ ಹಾಜರಾಗಬೇಕು. ನಾನು ಕಾನೂನನ್ನು ಪಾಲಿಸಲು ಬಯಸುತ್ತೇನೆ. ಸಂಸತ್ ಅಧಿವೇಶನದ ಮಧ್ಯದಲ್ಲಿ ನಾನು ಇಡಿ ವಿಚಾರಣೆಗೆ ಹಾಜರಾಗುವುದಾದರೂ ಹೇಗೆ? ಈ ಸಮಯದಲ್ಲಿ ನನ್ನನ್ನು ಇಡಿ ವಿಚಾರಣೆಗೆ ಕರೆಸುವುದು ಸೂಕ್ತವೇ? ಎಂದು ಸದನದಲ್ಲಿ ಖರ್ಗೆ ಆಕ್ರೋಶಭರಿತರಾಗಿ ಹೇಳಿದರು.
ಪೊಲೀಸರು ನಿನ್ನೆ ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಮನೆಗಳನ್ನು ಸುತ್ತುವರೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿ ಉಳಿಯುತ್ತದೆಯೇ? ನಾವು ಸಂವಿಧಾನದ ಪ್ರಕಾರ ಕೆಲಸ ಮಾಡಲು ಸಾಧ್ಯವೇ? ಎಂದು ಅವರು ಸಿಟ್ಟಿನಿಂದ ಹೇಳಿದರು. ಇಡಿ ವಿಚಾರಣೆಗೆ ನಾವು ಹೆದರುವುದಿಲ್ಲ, ಅದರ ವಿರುದ್ಧ ಹೋರಾಡುತ್ತೇವೆ ಎಂದೂ ಖರ್ಗೆ ಹೇಳಿದರು.
ವಿರೋಧ ಪಕ್ಷದ ನಾಯಕ ಖರ್ಗೆ ಅವರ ಮಾತುಗಳಿಗೆ ಉತ್ತರ ನೀಡಿದ ಸಭಾನಾಯಕ ಪಿಯೂಷ್ ಗೋಯಲ್ ಯಾವುದೇ ಕಾನೂನು ಜಾರಿ ಸಂಸ್ಥೆಯ ಕೆಲಸದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಇಂತಹ ಹಸ್ತಕ್ಷೇಪಗಳು ಬಹುಶಃ ಕಾಂಗ್ರೆಸ್ ಆಡಳಿತದಲ್ಲಿ ಆಗಿರಬಹುದು ಎಂದು ತಿರುಗೇಟು ನೀಡಿ ಯಾರಾದರು ತಪ್ಪು ಮಾಡಿದರೆ ತನಿಖಾ ಸಂಸ್ಥೆಗಳು ತಮ್ಮ ಕರ್ತವ್ಯ ನಿಭಾಯಿಸುತ್ತವೆ ಎಂದು ಹೇಳಿದರು.