ಇಡಿ ತನಿಖೆ ವಿರೋಧಿಸಿ ಕೈ ಪ್ರತಿಭಟನೆ

ಬೆಂಗಳೂರು, ಜೂ. ೨೨- ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿಯವರ ಇ.ಡಿ. ವಿಚಾರಣೆಯನ್ನು ಖಂಡಿಸಿ ಶಾಸಕ ಜಮೀರ್ ಅಹಮದ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಕಿಡಿಕಾರಿದರು.
ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಈ ಪ್ರತಿಭಟನೆ ಬೆಂಗಳೂರಿನ ಮೈಸೂರು ರಸ್ತೆಯ ಸಿರ್ಸಿ ಸರ್ಕಲ್‌ನಲ್ಲಿ ನಡೆದಿದ್ದು, ಶಾಸಕ ಜಮೀರ್ ಅಹಮದ್ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಪಕ್ಷದ ನಾಯಕ ರಾಹುಲ್ ಗಾಂಧಿ ಇಡಿ ತನಿಖೆ ವಿರೋಧಿಸಿ ಶಾಸಕ ಜಮೀರ್ ಅಹ್ಮದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಪಕ್ಷದ ನಾಯಕ ರಾಹುಲ್ ಗಾಂಧಿ ಇಡಿ ತನಿಖೆ ವಿರೋಧಿಸಿ ಶಾಸಕ ಜಮೀರ್ ಅಹ್ಮದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.


ರಾಜಕೀಯ ದ್ವೇಷದಿಂದ ಕೇಂದ್ರ ಸರ್ಕಾರ ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಯವರನ್ನು ಇ.ಡಿ. ವಿಚಾರಣೆಗೆ ಒಳಪಡಿಸಿದೆ ಎಂದು ಆಕ್ರೋಶ ಹೊರ ಹಾಕಿದ ಪ್ರತಿಭಟನಾಕಾರರು, ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಭಿತ್ತಿ ಪತ್ರಗಳನ್ನು ಹಿಡಿದು ರಸ್ತೆಯಲ್ಲೆ ಕುಳಿತು ಧರಣಿ ನಡೆಸಿದರು.
ಕಾಂಗ್ರೆಸ್ ಕಾರ್ಯಕರ್ತರ ಈ ಪ್ರತಿಭಟನಾ ಧರಣಿಯಿಂದ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕಾಂಗ್ರೆಸ್ ಕಾರ್ಯಕರ್ತರು ಮುಗಿಲು ಮುಟ್ಟುವಂತೆ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.
ಪೊಲೀಸರು ಧರಣಿತ ನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದು, ಕೆಲ ಹೊತ್ತಿನ ನಂತರ ಬಿಡುಗಡೆ ಮಾಡಿದರು.

ಜಮೀರ್ ಕಿಡಿ
ಕಾಂಗ್ರೆಸ್ ಕಾರ್ಯಕರ್ತರ ಈ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಶಾಸಕ ಜಮೀರ್ ಅಹಮದ್ ಖಾನ್ ನ್ಯಾಷನಲ್ ಹೆರಾಲ್ಡ್ ಪ್ರಕರಣ ೧೦ ವರ್ಷದ ಹಳೆಯ ಪ್ರಕರಣ. ಈ ಪ್ರಕರಣ ಕ್ಲೋಸ್ ಆಗಿತ್ತು. ಕಿರುಕುಳ ನೀಡುವ ಉದ್ದೇಶದಿಂದ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ರೀಓಪನ್ ಮಾಡಿದೆ. ರಾಜಕೀಯ ದ್ವೇಷ ಮಾಡುತ್ತಿದೆ ಎಂದು ಕಿಡಿಕಾರಿದರು.
೨೦೨೪ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕರನ್ನು ಬೆದರಿಸುವ ಹುನ್ನಾರವನ್ನು ಬಿಜೆಪಿ ನಡೆಸಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ತಪ್ಪು ಆಗಿದ್ದರೆ ಇ.ಡಿ. ತನಿಖೆ ನಡೆಸಲಿ. ಆದರೆ ಹಳೆಯ ಪ್ರಕರಣವನ್ನು ಮತ್ತೆ ಕೆದಕುವುದು ಸರಿಯಲ್ಲ ಎಂದರು.
ಇ.ಡಿ. ಇರುವುದು ಕೇವಲ ಕಾಂಗ್ರೆಸ್ ಪಕ್ಷದವರ ತನಿಖೆಗಾಗಿಯೇ, ಬಿಜೆಪಿಯವರನ್ನು ಏಕೆ ತನಿಖೆ ಮಾಡಿಲ್ಲ ಎಂದು ಜಮೀರ್ ಅಹಮದ್ ಖಾನ್ ಆಕ್ರೋಶ ಹೊರ ಹಾಕಿದರು.
೧೦ ವರ್ಷಗಳ ಹಿಂದೆಯೇ ಮುಗಿದು ಹೋದ ಪ್ರಕರಣದ ಬಗ್ಗೆ ರಾಹುಲ್‌ಗಾಂಧಿಯವರನ್ನು ೫೪ ಗಂಟೆ ವಿಚಾರಣೆಗೆ ಒಳಪಡಿಸುವ ಅಗತ್ಯ ಇರಲಿಲ್ಲ. ಕಿರುಕುಳ ನೀಡುವ ಏಕೈಕ ಉದ್ದೇಶದಿಂದ ಬಿಜೆಪಿ ನಾಯಕರು ಈ ರೀತಿ ಮಾಡಿದ್ದಾರೆ. ಜನ ಇವರಿಗೆ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಇ.ಡಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಕೆ.ಜಿ. ಜಾರ್ಜ್ ಹಾಗೂ ತಮ್ಮ ಮೇಲೂ ದಾಳಿ ನಡೆಸಿ ತನಿಖೆ ನಡೆಸುತ್ತಿದೆ. ಇ.ಡಿ.ಗೆ ಕಾಂಗ್ರೆಸ್ ನಾಯಕರು ಮಾತ್ರ ಕಾಣುತ್ತಾರೆಯೇ ಎಂದು ವ್ಯಂಗ್ಯವಾಡಿದರು.
ಇಂದಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಾದ್ದರಿಂದ ಸಿದ್ದರಾಮಯ್ಯ ಹಾಗೂ ಇತರ ಶಾಸಕರ ಜತೆ ದೆಹಲಿಗೆ ತೆರಳಲು ಸಾಧ್ಯವಾಗಿಲ್ಲ. ಪ್ರತಿಭಟನೆ ಮೊದಲೇ ನಿಗದಿಯಾಗಿತ್ತು. ಇದನ್ನು ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದೇನೆ ಎಂದು ಜಮೀರ್ ಅಹಮದ್ ಖಾನ್ ದೆಹಲಿಗೆ ಹೋಗದ ಬಗ್ಗೆ ಸಮಜಾಯಿಷಿ ನೀಡಿದರು.