ಇಡಿ ಕಚೇರಿ ಮುಂದೆ ಕೈ ಪ್ರತಿಭಟನೆ ವೇಳೆ 2 ಕಾರುಗಳಿಗೆ ಬೆಂಕಿ 11ಮಂದಿ ಸೆರೆ

ಬೆಂಗಳೂರು, ಜು.21- ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆಗೆ ಒಳಪಡಿಸಿರುವುದನ್ನು ಖಂಡಿಸಿ ನಗರದ ಇಡಿ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಎರಡು ಕಾರಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಶಾಂತಿನಗರದಲ್ಲಿರುವ ಇಡಿ ಕಚೇರಿ ಮುಂದೆ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು‌. ಈ ವೇಳೆ ರಸ್ತೆಬದಿ ಪಾರ್ಕ್ ಮಾಡಲಾಗಿದ್ದ ಎರಡು ಕಾರುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ನೋಡ ನೋಡುತ್ತಿದ್ದಂತೆ ಕಾರುಗಳು ಧಗ-ಧಗನೇ ಹೊತ್ತಿಉರಿದು ಸಂಪೂರ್ಣ ಹಾನಿಯಾಗಿವೆ.‌‌
ಭದ್ರತೆಗೆ ನಿಯೋಜನೆಗೊಂಡಿದ್ದ ಸ್ಥಳೀಯ ಪೊಲೀಸರು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಕರೆಯಿಸಿ ಅಗ್ನಿ ನಂದಿಸಿದ್ದಾರೆ. ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟ 11 ಮಂದಿಯನ್ನು ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾರನ್ನು ತಂದವರೂ ಸಹ ಪೊಲೀಸರ ವಶದಲ್ಲಿದ್ದಾರೆ ಎಂದು ತಿಳಿಸಿದರು.
ಅಲ್ಲದೇ, ಬೆಂಕಿ ಇಟ್ಟವರು ಕಾಂಗ್ರೆಸ್ ಕಾರ್ಯಕರ್ತರು ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತಂತೆ ಪೊಲೀಸ್​ ವಶಕ್ಕೆ ಪಡೆದವರ ವಿಚಾರಣೆ ನಡೆಸಿ ಸೂಕ್ತ ಮಾಹಿತಿ ಕಲೆ ಹಾಕಲಾಗುತ್ತದೆ. ಜೊತೆಗೆ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಿದರು.