ಕಲಬುರಗಿ,ಮಾ 31: ಮುಂಬರುವ ದಿನಗಳಲ್ಲಿ ಇಡಬ್ಲ್ಯೂಎಸ್ ಸೌಲಭ್ಯ ಪಡೆಯಲು ಸರಕಾರ ವಿಧಿಸಿರುವ ಅವೈಜ್ಞಾನಿಕ ಮಾನದಂಡಗಳನ್ನು ತಿದ್ದುಪಡಿ ಮಾಡಿಸಲು ಕಾನೂನಾತ್ಮಕ ಹೋರಾಟ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಬ್ರಾಹ್ಮಿನ್ ಆರ್ಗನೈಸೇಶನ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ರವೀಂದ್ರ ಕುಲಕರ್ಣಿ ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಇಡಬ್ಲ್ಯೂಎಸ್ ಮೀಸಲಾತಿ ವಿಷಯ ಮತ್ತು ಅನುಷ್ಠಾನದ ವಿಷಯದಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಹಾಯ ಮತ್ತು ಸಹಕಾರಿಯಾಗಬೇಕಿದ್ದ ಮೀಸಲಾತಿ ಅನುಷ್ಠಾನ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆ ಖಂಡಿಸಿ ಬ್ರಾಹ್ಮಿನ್ ಆರ್ಗನೈಸೇಶನ್ ಆಫ್ ಇಂಡಿಯಾ ( ಬಿ ಓ ಐ ) ಕೆಲ ತಿಂಗಳಿನಿಂದ ಮಾಡಿದ ಹೋರಾಟ ಮತ್ತು ಸತತ ಪ್ರಯತ್ನ ಮತ್ತು ಮೊನ್ನೆ ಬಿ ಓ ಐ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆದ ಹೋರಾಟದ ಫಲವಾಗಿ ರಾಜ್ಯ ಸರಕಾರ ಶೇ 10 ಮೀಸಲಾತಿಯನ್ನು ಜಾರಿಗೆಗೊಳಿಸಲು ಆದೇಶಿಸಿದೆ.ಆದೇಶವನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲು ಸಹ ಬಿ ಓ ಐ ಬಹಳ ಕ್ರಿಯಾಶೀಲವಾಗಿ ತನ್ನ ಕಾರ್ಯ ನಡೆಸುತ್ತಿದೆ.
ಮುಂಬರುವ ದಿನಗಳಲ್ಲಿ ಮೀಸಲಾತಿ ಮತ್ತು ಸಮಾಜಕ್ಕೆ ಉಪಯೋಗಕಾರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಬಿ ಓ ಐ ಸದಾಕಾಲ ಸನ್ನದ್ಧವಾಗಿದೆ ಎಂದು ರವೀಂದ್ರ ಕುಲಕರ್ಣಿ ತಿಳಿಸಿದ್ದಾರೆ.