ಇಟ್ಟಂಗಿಹಾಳ ಹತ್ತಿರ ಪುಡ್‍ಪಾರ್ಕ್ ನಿರ್ಮಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್‍ರಿಗೆ ಮನವಿ

ವಿಜಯಪುರ, ಡಿ.27-ವಿಜಯಪುರ ಸಮೀಪದ ಇಟ್ಟಂಗಿಹಾಳ ಹತ್ತಿರ ಪುಡ್‍ಪಾರ್ಕ್ ನಿರ್ಮಿಸಬೇಕೆಂದು ವಿಜಯಪುರ ಜಿಲ್ಲೆಯ ರೈತರ ಹಾಗೂ ಉದ್ಯಮಿಗಳ ನಿಯೋಗ ಇಂದು ಬೆಂಗಳೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿ ವಿನಂತಿಸಲಾಯಿತು.
ವಿಜಯಪುರ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹೆಸರುವಾಸಿಯಾಗಿದ್ದು, ದಾಳಿಂಬೆ, ಲಿಂಬೆ, ದ್ರಾಕ್ಷಿ, ಮಾವು, ಬಾರೆ, ಪೆರಲ ಹಾಗೂ ಇತರೆ ಅನೇಕ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದು, ಈ ರೈತರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಸಂಸ್ಕರಣೆ ಹಾಗೂ ತಯಾರಿಕೆ ಅನಕೂಲತೆಗಳನ್ನು ಕಲ್ಪಿಸಿದರೆ, ಈ ಭಾಗದಲ್ಲಿ ಉತ್ತಮ ಸಣ್ಣ ಉದ್ಯಮಿಗಳು ಆರಂಭವಾಗುವವು ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ರವರು 30.11.2020ರಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಪತ್ರ ಬರೆದು ಕೋರಿದ್ದರು.
ಆ ಹಿನ್ನೆಲೆಯಲ್ಲಿ ರೈತರ ನಿಯೋಗ ಇಂದು ಸಚಿವರನ್ನು ಭೇಟಿ ಮಾಡಿ, ನಗರಕ್ಕೆ ಹೊಂದಿಕೊಂಡಿರುವ ಇಟ್ಟಂಗಿಹಾಳ ಹತ್ತಿರ ಪುಡ್‍ಪಾರ್ಕ ನಿರ್ಮಿಸಲು 72ಎಕರೆ ಜಮೀನನ್ನು ಈಗಾಗಲೇ ಮೀಸಲಿರಿಸಲಾಗಿದ್ದು, ಇದೇ ಸ್ಥಳದಲ್ಲಿ ಪುಡ್‍ಪಾರ್ಕ್ ಆರಂಭಿಸಿದರೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಅಲ್ಲದೇ ಸಣ್ಣ, ಅತೀಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತದೆ.
ಜಿಲ್ಲೆಯಲ್ಲಿ ಬಹುತೇಕ ಪ್ರದೇಶ ನೀರಾವರಿಗೆ ಒಳಪಟ್ಟಿರುವದರಿಂದ ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ತೋಟಗಾರಿಕಾ ಪ್ರದೇಶ ಬೆಳವಣಿಗೆ ಆಗಲಿದೆ. ಆ ನಿಟ್ಟಿನಲ್ಲಿ ವಿಜಯಪುರ ಪುಡ್‍ಪಾರ್ಕ್‍ಗೆ ಮಾನ್ಯ ಕೃಷಿ ಸಚಿವರು ಹೆಚ್ಚು ಒತ್ತು ನೀಡಬೇಕು ಎಂದು ಸವಿವರವಾಗಿ ತಿಳಿಸಲಾಯಿತು.
ರೈತರ ನಿಯೋಗದ ಮನವಿಗೆ ಸ್ಪಂಧಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಶೀಘ್ರದಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು, ಪುಡ್‍ಪಾರ್ಕ್ ಸ್ಥಾಪನೆಗೆ ಕೂಡಲೇ ಕ್ರಮ ಜರುಗಿಸಲಾಗುವದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ ಹಾಗೂ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ, ಪ್ರಖ್ಯಾತ ದ್ರಾಕ್ಷಿ ಬೆಳೆಗಾರ ಸೋಮನಾಥ ಬಾಗಲಕೋಟ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಕೆ.ಎಸ್.ಮುಂಬಾರೆಡ್ಡಿ, ಬಿ.ಎಲ್.ಡಿ.ಇ ನಿರ್ದೇಶಕ ಬಸನಗೌಡ ಎಂ.ಪಾಟೀಲ್, ಪ್ರಗತಿಪರ ರೈತರಾದ ದುಂಡಪ್ಪ ಬಡ್ರಿ, ಅಜೇಯ ಪಾಟೀಲ ಹಣಮಾಪುರ ನಿಯೋಗದಲ್ಲಿದ್ದರು.