ಇಟ್ಟಂಗಿಯಿಂದ ಹೊಡೆದು ಕೊಲೆ:ಆರೋಪಿ ಬಂಧನ

ಕಲಬುರಗಿ,ಏ 2: ಸಾಲ ವಾಪಸ್ಸು ನೀಡದ ವ್ಯಕ್ತಿಗೆ ಇಟ್ಟಂಗಿಯಿಂದ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ ಘಟನೆ ಕಲಬುರಗಿ ವೀರೇಶನಗರದಲ್ಲಿ ನಡೆದಿದೆ.
ವೀರೇಶ ನಗರದ ನಿವಾಸಿ ಚಂದ್ರಕಾಂತ ಶಿವಶರಣಪ್ಪ ಬಿರಾದಾರ ( 26) ಹತ್ಯೆಗೀಡಾದ ವ್ಯಕ್ತಿ.ವೀರೇಶ ನಗರದ ಶಶಿಕಾಂತ ರಂಗಪ್ಪ ತಳವಾರ ( 25) ಎಂಬ ಆರೋಪಿಯನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.
ಕಳೆದ ಹೋಳಿಹುಣ್ಣಿಮೆ ಸಂದರ್ಭದಲ್ಲಿ ಚಂದ್ರಕಾಂತನು ಶಶಿಕಾಂತನಿಂದ 5 ಸಾವಿರ ರೂ ಸಾಲ ಪಡೆದಿದ್ದನು. ಶಶಿಕಾಂತನು ತನ್ನ ಹಣ ವಾಪಸ್ಸು ಕೇಳಿದಾಗ ಚಂದ್ರಕಾಂತನು ಆಗ ಈಗ ಎನ್ನುತ್ತ ಮುಂದೆ ಹಾಕುತ್ತ ಬಂದಿದ್ದಾನೆ.ಮಾ.29 ರಂದು ರಾತ್ರಿ 11.30 ರ ಸುಮಾರಿಗೆ ಇಬ್ಬರ ನಡುವೆ ಈ ಸಂಬಂಧ ವಾಗ್ವಾದವಾಗಿದೆ.ಆಗ ಶಶಿಕಾಂತನು ಚಂದ್ರಕಾಂತನಿಗೆ ಇಟ್ಟಂಗಿಯಿಂದ ಹೊಡೆದಿದ್ದಾನೆ.ತೀವ್ರಗಾಯಗೊಂಡ ಚಂದ್ರಕಾಂತನನ್ನು ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಚಂದ್ರಕಾಂತ ಸಾವಿಗೀಡಾಗಿದ್ದಾನೆ.ಶಶಿಕಾಂತ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.