ಇಟಗಿ ಹೋಬಳಿ ಕೇಂದ್ರಕ್ಕೆ ಆಗ್ರಹಿಸಿ, ಟ್ಯಾಕ್ಟರ್ ಮೂಲಕ ಪ್ರತಿಭಟನೆ.


 ಸಂಜೆವಾಣಿ ವಾರ್ತೆ
ಕುಕನೂರು, ಮಾ.14: ಇಟಗಿ ಹೋಬಳಿ ಕೇಂದ್ರವನ್ನು ಶೀಘ್ರದಲ್ಲಿ ಘೋಷಣೆ ಮಾಡದಿದ್ದರೆ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಇಟಗಿ ಹೋಬಳಿ ಹೋರಾಟ ಸಮಿತಿಯ ಮುಖಂಡರು ಬುಧವಾರ ಒತ್ತಾಯಿಸಿ ಪ್ರತಿಭಟಿಸಿದರು.   
ಪಟ್ಟಣದಲ್ಲಿ ಇಟಗಿ ಹೋಬಳಿ ಕೇಂದ್ರ ಹೋರಾಟ ಸಮಿತಿಯಿಂದ ಟ್ಯಾಕ್ಟರ್ ಮೂಲಕ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಗೌರವಧ್ಯಕ್ಷ ಬಸವರಾಜ ಎಂ. ಹಳ್ಳಿ ಮಾತನಾಡಿ, ಇಟಗಿ ಗ್ರಾಮವನ್ನ ಹೋಬಳಿ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಏಕೆಂದರೆ, ಇಟಗಿ ಗ್ರಾಮ ಹೋಬಳಿ ಕೇಂದ್ರಕ್ಕೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಅಲ್ಲದೆ ಸುತ್ತುಮುತ್ತ ಸಾಕಷ್ಟು ಗ್ರಾಮಗಳಿದ್ದು ಅವುಗಳಿಗೆ ಅನುಕೂಲವಾಗಿದೆ. ಇಟಗಿ ಹೋಬಳಿ ಕೇಂದ್ರ ಮಾಡಬೇಕೆಂದು ೬ ಬಾರಿ ಮನವಿಯನ್ನು ಸಲ್ಲಿಸಲಾಗಿದೆ. ಶಾಸಕ ಬಸವರಾಜ ರಾಯರೆಡ್ಡಿ ಅವರು, ತಹಶೀಲ್ದಾರ್ ಅವರು ಸೇರಿದಂತೆ ಅಧಿಕಾರಿಗಳು ಇಟಗಿ ಗ್ರಾಮವನ್ನು ಹೋಬಳಿ ಕೇಂದ್ರ ಮಾಡಲು ಗಂಭೀರವಾಗಿ ಪರಿಗಣಿಸಬೇಕು ಇಲ್ಲದಿದ್ದರೆ ಮುಂದೆ ಬರುವ ಲೋಕಸಭೆ ಚುನಾವಣೆಯನ್ನು ಅನೇಕ ಗ್ರಾಮಗಳಲ್ಲಿ ಬಹಿಷ್ಕರಿಸುತ್ತೇವೆ. ತಹಶೀಲ್ದಾರ್ ಕಚೇರಿಯ ಮುಂದೆ ಧರಣಿ, ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ ಮತ್ತು ರಸ್ತೆ ರೋಕ್ ಚಳುವಳಿಯನ್ನು ಪ್ರಾರಂಭಿಸಲಾಗುವದು ಎಂದು ಒತ್ತಾಯಿಸಿದರು.
ಪಟ್ಟಣ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ಪ್ರಮುಖ ಬಸ್ ನಿಲ್ದಾಣ, ವೀರಭದ್ರಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ  ಘೋಷಣೆಗಳನ್ನು ಕೋಗಿದರು. ಇಟಗಿ, ಮಂಡಲಗೇರಿ, ಮನ್ನಾಪೂರ, ಬನ್ನಿಕೊಪ್ಪ, ಯರೇಹಂಚಿನಾಳ, ಚಿಕೇನಕೊಪ್ಪ, ನಿಂಗಾಪೂರ ಗ್ರಾಮದ ಮುಖಂಡರು ೨೬ ಟ್ಯಾಕ್ಟರ್ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಗ್ರೇಡ್-೨ ತಹಶೀಲ್ದಾರ್ ಮುರುಳಿಧರ್ ಕುಲಕರ್ಣಿ, ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಅವರ ಕಚೇರಿಗೆ ಸಲ್ಲಿಸುವಲಾಗುವದು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ, ಇಟಗಿ ಹೋಬಳಿ ಕೇಂದ್ರ ಹೋರಾಟ ಸಮಿತಿ ಅಧ್ಯಕ್ಷ ಬಸನಗೌಡ್ರ ಪೋ,ಪಾಟೀಲ್, ಪ್ರಧಾನ ಕಾರ್ಯದರ್ಶಿ ವಜೀರಸಾಬ ತಳಕಲ್ಲ, ಗೌರವಾಧ್ಯಕ್ಷ ಶಿವಪ್ಪ ಗುಳಗಣ್ಣವರ್, ಮುಖಂಡರಾದ ಮಹಾದೇವಪ್ಪ ಹಳ್ಯಾಳ, ಉಮೇಶ ವೀರಾಪೂರ, ಮರ್ತುಜಸಾಬ್ ತಳಕಲ್ಲ, ವೀರಣ್ಣ ಸಜ್ಜನ್, ಗವಿಸಿದ್ದಪ್ಪ ಗುಳಗಣ್ಣವರ್, ಗ್ರಾ.ಪಂ ಮಾಜಿ ಅಧ್ಯಕ್ಷ ಗವಿಸಿದ್ದಪ್ಪ ಮುದ್ದಾಬಳ್ಳಿ, ರಾಮು ಕೌದಿ, ಕಳಕಪ್ಪ ಕ್ಯಾದಗುಂಪಿ, ಬಸವಗೌಡ ಎಸ್ ಪಾಟೀಲ್, ವಿಜಯಕುಮಾರ ನಾಗನೂರು, ಸಾವಿತ್ರಿಮ್ಮ ತೆಗ್ಗಿನಮನಿ, ಪ್ರವೀಣ ಗುಳಗಣ್ಣವರ್, ಬಸವರಾಜ ಕಳ್ಳಿ, ರಾಜು ಹೊಂಬಳಿ, ಸಂಜೀವಪ್ಪ ಸಂಗಟಿ, ಲಕ್ಷö್ಮಣ ಕೋರಿ, ನೀಲರೆಡ್ಡೆಪ್ಪ ಘಟಿರೆಡ್ಡಿಹಾಳ, ರಾಮಣ್ಣ ಹಿರೇಮನಿ, ಬಸಪ್ಪ ಮಂಡಲಗೇರಿ, ಮಹೇಶ ಹಿರೇಮನಿ ಸೇರಿದಂತೆ ಅನೇಕರು ಇದ್ದರು.