ಇಟಗಾದ ಸಂತ್ರಸ್ತರೊಂದಿಗೆ ದೀಪಾವಳಿ ನಿಮಿತ್ಯ ನಾಗತಿಹಳ್ಳಿ ಸಂಸ್ಕøತಿ ಹಬ್ಬ

ಕಲಬುರಗಿ:ನ.14:ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಇಟಗಾ ಗ್ರಾಮದ ನೆರೆ ಸಂತ್ರಸ್ತರೊಂದಿಗೆ ನವೆಂಬರ್ 15ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ನಾಗತಿಹಳ್ಳಿ ಸಂಸ್ಕøತಿ ಹಬ್ಬದ ನಿಮಿತ್ಯ ಸಾಂಕೇತಿಕವಾಗಿ ದೀಪಾವಳಿ ಹಬ್ಬ ಆಚರಿಸಿ ನೆರವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಇಟಗಾ ಗ್ರಾಮದ ಎಲ್ಲ ಪ್ರವಾಹ ಸಂತ್ರಸ್ತರಿಗೆ ಅಕ್ಕಿ, ಬೇಳೆ, ಸಕ್ಕರೆ, ಉಪ್ಪು, ಅಡಿಗೆ ಎಣ್ಣೆ, ದೀಪ, ಮಕ್ಕಳಿಗೆ ಓದುವ, ಬರೆಯುವ ಸಲಕರಣೆಗಳೊಂದಿಗೆ ಸಿಹಿ ಹಂಚಿ ಸಾಂಕೇತಿಕವಾಗಿ ದೀಪಾವಳಿ ಆಚರಿಸಲಾಗುವುದು ಎಂದರು.
ಜಿಲ್ಲೆಗೆ ಒಂದು ಸಾಮಾಜಿಕ ಕಳಕಳಿಯೊಂದಿಗೆ ಭೇಟಿ ನೀಡುತ್ತಿರುವೆ. ಪ್ರವಾಹದಿಂದ ಸಾಕಷ್ಟು ಜನರು ನಲುಗಿ ಹೋಗಿದ್ದಾರೆ. ಬಡವರು ತತ್ತರಗೊಂಡಿದ್ದಾರೆ. ಸರ್ಕಾರ ಹಾಗೂ ಹಲವಾರು ಸಂಘ, ಸಂಸ್ಥೆಗಳು ತಮ್ಮ ತಮ್ಮ ಶಕ್ತಿಗೆ ಅನುಗುಣವಾಗಿ ನೆರವಾಗಿದ್ದಾರೆ. ಅದರಂತೆ ಕಳೆದ ಮೂರುವರೆ ದಶಕಗಳಿಂದಲೂ ಅಭಿವ್ಯಕ್ತಿ ಸ್ವಾತಂತ್ರ್ಯ ವೇದಿಕೆಯು ಹಲವಾರು ಜನಪರ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಚಿತ್ರೋದ್ಯಮಕ್ಕೆ ಹೊಸ ಪ್ರತಿಭೆಗಳನ್ನು ನೀಡಲು ಟೆಂಟ್ ಸಿನೇಮಾ ಶಾಲೆ ಆರಂಭಿಸಲಾಗಿದೆ. ಪ್ರತಿ ವರ್ಷ ನನ್ನ ಹುಟ್ಟೂರು ನಾಗತಿಹಳ್ಳಿಯಲ್ಲಿ ನಾಗತಿಹಳ್ಳಿ ಸಂಸ್ಕøತಿ ಹಬ್ಬ ಆಚರಿಸುತ್ತಿದ್ದು, ಈ ಬಾರಿ ಇಟಗಾದಲ್ಲಿ ಹಮ್ಮಿಕೊಳ್ಳಲು ಶಿಷ್ಯಬಳಗ ನಿರ್ಧರಿಸಿದೆ ಎಂದು ಅವರು ವಿವರಿಸಿದರು.
ಕೊರೋನಾ ಹರಡುವ ಭೀತಿಯಿಂದಾಗಿ ಚಿತ್ರಮಂದಿರದ ಕಡೆಗೆ ಬರಲು ಜನರು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಚಿತ್ರೋದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಕೊರೋನಾ ಲಸಿಕೆ ಬರುವವರೆಗೂ ಇಂತಹ ದುಸ್ಥಿತಿ ಮುಂದುವರೆಯಲಿದೆ ಎಂದು ಅವು ಕಳವಳ ವ್ಯಕ್ತಪಡಿಸಿದರು.
ಕೊರೋನಾದಿಂದ ಚಿತ್ರಮಂದಿರಗಳನ್ನು ಮುಚ್ಚಲಾಯಿತು. ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಚಲನಚಿತ್ರೋದ್ಯಮಕ್ಕೆ ತುಂಬಲಾಗದ ನಷ್ಟವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಕೆಳ ಹಂತದಲ್ಲಿ ಕೆಲಸ ಮಾಡುವ ಕಾರ್ಮಿಕರ ಬದುಕು ದುಸ್ತರವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಚಲನಚಿತ್ರ ಪ್ರದರ್ಶನಕ್ಕೆ ಕೆಲವು ಶರತ್ತುಗಳ ಮೂಲಕ ಅನುಮತಿ ನೀಡಿದರೂ ಸಹ ಪ್ರೇಕ್ಷಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಶೇಕಡಾ 50ರಷ್ಟು ಆಸನಗಳನ್ನು ಭರ್ತಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದಾಘ್ಯೂ, ಶೇಕಡಾ 4ರಿಂದ 5ರಷ್ಟು ಪ್ರಮಾಣದಲ್ಲಿ ಮಾತ್ರ ಪ್ರೇಕ್ಷಕರು ಬರುತ್ತಿರುವುದು ಚಿತ್ರಮಂದಿರಗಳಿಗೂ ಸಹ ತುಂಬಲಾಗದ ನಷ್ಟವಾಗಿದೆ ಎಂದು ಅವರು ಹೇಳಿದರು.
ಕೊರೋನಾ ನಿಯಂತ್ರಣಕ್ಕೆ ಬರಲು ಇನ್ನೂ ಕನಿಷ್ಠ ಆರು ತಿಂಗಳು ಬೇಕು. ಅಲ್ಲಿಯವರೆಗೂ ಇಂತಹ ದುಸ್ಥಿತಿ ಮುಂದುವರೆಯಲಿದೆ. ಆದಷ್ಟು ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಇಂತಹ ಸಾಮಾಜಿಕ ಕಾಳಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ರಂಗಸಮಾಜದ ಮಾಜಿ ಸದಸ್ಯೆ ಡಾ. ಸುಜಾತಾ ಜಂಗಮಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.