ಇಆರ್‌ಎಸ್‌ಎಸ್ ವ್ಯವಸ್ಥೆಗೆ ಜಿಲ್ಲೆಯಲ್ಲಿ ೧೩ ವಾಹನಗಳಿಗೆ ಎಸ್ ಪಿ ಚಾಲನೆ

ರಾಯಚೂರು.ಏ.೩೦-ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಪೊಲೀಸ್ ಇಲಾಖೆ ವತಿಯಿಂದ ನೆರವು ಒಗದಗಿಸಲು ತುರ್ತು ಸ್ಪಂದಿಸುವ ನೆರವು ವ್ಯವಸ್ಥೆ (ಇಆರ್ ಎಸ್‌ಎಸ್) ಇರುವ ೧೩ ನೂತನ ವಾಹನಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಶುಕ್ರವಾರ ಚಾಲನೆ ನೀಡಿದರು.
ಅವರಿಂದು ನಗರದ ಪೊಲೀಸ್ ಕವಾಯತ್ತು ಮೈದಾನದಲ್ಲಿ ಅಮ್ಮಿಕೊಂಡಿದ್ದ ೧೩ ಇಆರ್ ಎಸ್‌ಎಸ್ ವಾಹನಗಳಿಗೆ ಚಾಲನೆ ನೀಡಿ ಮಾತನಾಡುತ್ತ ಪೊಲೀಸ್ ಕರೆ ಸಂಖ್ಯೆ ೧೦೦ ಬದಲಾಗಿ ೧೧೨ ಸಂಖ್ಯೆ ಇವತ್ತಿನಿಂದ ಅಸ್ತಿತ್ವಕ್ಕೆ ಬಂದಿದೆ. ಈ ವಾಹನಕ್ಕೆ ಬೇರೆ ಕೆಲಸ ವಹಿಸುವುದಿಲ್ಲ. ೧೩ ವಾಹನಗಳಿಗೆ ಏಳು ಇನ್ ಸ್ಪೆಕ್ಟರ್ ಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದರು.
ಇಆರ್ ಎಸ್‌ಎಸ್ ವಾಹನ ನಿಲುಗಡೆಗಾಗಿ ನಿರ್ದಿಷ್ಟ ಸ್ಥಳ ಗುರುತಿಸಲಾಗಿದೆ. ತುರ್ತಾಗಿ ಬರುವ ಕರೆಗೆ ಸ್ಪಂದಿಸಬೇಕು. ರಿಸ್ಪಾಂಡರ್ ಹಾಗೂ ಚಾಲಕ ಇಬ್ಬರು ವಾಹನದಲ್ಲಿ ಇರುತ್ತಾರೆ.ಕಂಟ್ರೋಲ್ ರೂಂ ವಾಹನಗಳು ಇವಾಗಿದ್ದು, ಇದೊಂದು ಒಳ್ಳೆಯ ಯೋಜನೆ ಆಗಿದೆ. ೧೫ ಸೆಕೆಂಡ್ ನಲ್ಲಿ ದೂರು ಸ್ವೀಕರಿಸಿ ೧೫ ನಿಮಿಷಗಳಲ್ಲಿ ಸ್ಥಳ ತಲುಪಬೇಕು ಎಂದು ತಿಳಿಸಿದರು.
ರಸ್ತೆ ಅಪಘಾತ, ಅಪರಾಧ ಪ್ರಕರಣಗಳು ಆಗಿದ್ದಾಗ, ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಕೊಡಬೇಕು.
ಇಆರ್ ಎಸ್‌ಎಸ್ ನೋಡಲ್ ಅಧಿಕಾರಿ ಎಂ.ಮಹೇಶ ಮಾತನಾಡಿ, ಮಹಿಳಾ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಷಯದಲ್ಲಿ ಪೊಲೀಸರು ಎಚ್ಚರಿಕೆಯಿಂದ ವರ್ತಿಸಬೇಕು. ಯಾವುದೇ ಸೂಚನೆ ಇಲ್ಲದೆ ವಾಹನವನ್ನು ಕದಲಿಸಬಾರದು. ಕರ್ತವ್ಯದಲ್ಲಿದ್ದಾಗ ಧೂಮಪಾನ, ಮದ್ಯಪಾನ ಮಾಡುವಂತಿಲ್ಲ ಎಂದರು.
ಕರ್ತವ್ಯ ನಿರ್ವಹಿಸುವಾಗ ಎಲ್ಲ ರಸ್ತೆ ನಿಯಮ ಪಾಲನೆ ಮಾಡಬೇಕು. ವಾಹನದಲ್ಲಿ ಇಂಟರ್ ನೆಟ್ ವ್ಯವಸ್ಥೆ ಇದ್ದು, ಮನೋರಂಜನೆಗಾಗಿ ಬಳಸುವಂತಿಲ್ಲ. ಕರ್ತವ್ಯಕ್ಕೆ ಹಾಜರಾಗುವಾಗ ವಾಹನದಲ್ಲಿ ಏನೇನೂ ವ್ಯವಸ್ಥೆ ಇದೆ ತಪಾಸಣೆ ಮಾಡಿಕೊಳ್ಳಬೇಕು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಸಿಪಿಐ, ಡಿವೈ ಎಸ್ಪಿ, ಹೆಡ್ ಕಾನ್ ಸ್ಟೇಬಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.