ಇಂಧನ ಸಂಪನ್ಮೂಲ ಉಳಿಸಲು ಕರೆ

ತುಮಕೂರು, ಡಿ. ೨೦- ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ವಿದ್ಯುತ್ ಮತು ವಿದ್ಯುನ್ಮಾನ ವಿಭಾಗ ಮತ್ತು ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃಧ್ದಿ ನಿಯಮಿತದ ಸಹಯೋಗದಲ್ಲಿ ?ಇಂಧನ ಉಳಿತಾಯ ಜಾಥಾ ಸಪ್ತಾಹ? ಅಂಗವಾಗಿ ನಾಗರಿಕರಲ್ಲಿ ಇಂಧನ ಉಳಿತಾಯ ಮತ್ತು ಮರು ಬಳಕೆಯ ಕುರಿತು ಅರಿವು ಮೂಡಿಸುವ ಜಾಗೃತಿ ಜಾಥಾವನ್ನು ಎಸ್‌ಎಸ್‌ಐಟಿ ಕ್ಯಾಂಪಸ್ ಆವರಣದಿಂದ ಟೌನ್‌ಹಾಲ್ ವರೆಗೂ ನಡೆಸಲಾಯಿತು.
ಜಾಥಾಗೆ ಹಸಿರು ನಿಶಾನೆ ತೋರಿ ಮಾತನಾಡಿದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಂ.ಎಸ್. ರವಿಪ್ರಕಾಶ್, ಪ್ರಸಕ್ತ ಸಂದರ್ಭದಲ್ಲಿ ಬಹಳಷ್ಟು ಇಂಧನ ಶಕ್ತಿಯನ್ನು ನಷ್ಟ ಮಾಡುತ್ತಿರುವುದರಿಂದ ಮುಂದಿನ ಪೀಳಿಗೆಗೆ ಬಹಳಷ್ಟು ತೊಂದರೆಯಾಗುತ್ತದೆ. ಅಮೂಲ್ಯವಾದ ಇಂಧನ ಸಂಪನ್ಮೂಲಗಳನ್ನು ಉಳಿಸಬೇಕೆಂದು ಸಲಹೆ ನೀಡಿದರು.
ಇಂಧನ ಶಕ್ತಿ ಉಳಿಸುವಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದ್ದು, ಯುವಜನರಲ್ಲಿ ಮತ್ತು ನಾಗರಿಕರಲ್ಲಿ ಇಂಧನದ ಉಳಿತಾಯ ಮತ್ತು ಮರುಬಳಕೆಯ ಬಗ್ಗೆ ಅರಿವೂ ಮೂಡಿಸಬೇಕು. ಇಂಧನ ಬಹು ಮುಖ್ಯ ಸಂಪನ್ಮೂಲವಾಗಿದ್ದು, ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳು, ಕೈಗಾರಿಕೆಗಳು ಮುಂತಾದ ಸಂಸ್ಥೆಗಳಲ್ಲಿ ಇಂಧನವನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಇಂಧನದ ಉಳಿತಾಯ ಮಾರ್ಗಗಳನ್ನು ಅನುಸರಿಸಬೇಕು ಎಂದು ಕರೆ ನೀಡಿದರು.
ಸಾಹೆ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಝಡ್. ಕುರಿಯನ್ ಮಾತನಾಡಿ, ಶೈಕ್ಷಣಿಕ ಕೆಲಸ ಮಾಡುವುದಷ್ಟೆ ಶಿಕ್ಷಣ ಸಂಸ್ಥೆಗಳ ಗುರಿಯಾಗಬಾರದು. ಸಾರ್ವಜನಿಕವಾಗಿ ಜಾಗೃತಿ, ಕಾಳಜಿ ಕೂಡ ಶಿಕ್ಷಣ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅರಿವು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಅನವಶ್ಯಕವಾಗಿ ವಿದ್ಯುತ್ ವ್ಯರ್ಥ ಮಾಡುವಿಕೆಯನ್ನು ಸ್ವಪ್ರೇರಣೆಯಿಂದ ತಡೆಗಟ್ಟಬೇಕು ಎಂದರು.
ಶ್ರೀ ಸಿದ್ಧಾರ್ಥ ಪದವಿ ಕಾಲೇಜಿನ ವಿದ್ಯಾರ್ಥಿ ಮುಸ್ಕಾನ್ ಮಾತನಾಡಿ, ವಿದ್ಯುತ್ತನ್ನು ಮಿತವಾಗಿ ಬಳಸುವುದರಿಂದ ಮುಂದಿನ ಪೀಳಿಗೆಗೆ ಉಪಯುಕ್ತವಾಗುತ್ತದೆ. ವಿದ್ಯುತ್ ಉಳಿದರೆ ದೇಶ ಉಳಿದಂತೆ. ಹಾಗಾಗಿ ವಿದ್ಯುತ್ ಶಕ್ತಿಯನ್ನು ಉಳಿಸಿ ವಿದ್ಯುತ್ ಇಲ್ಲದ ಪ್ರತಿ ಗ್ರಾಮಗಳಿಗೂ ವಿದ್ಯುತ್ ನೀಡುವಲ್ಲಿ ನೆರವಾಗಬೇಕು ಎಂದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರ್ ರೇವತಿ ಮಾತನಾಡಿ, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ, ಸಂಶೋಧನೆ, ಅಭಿವೃದ್ದಿ ಇವುಗಳು ನಮ್ಮ ದೇಶದ ಇಂಧನ ಶಕ್ತಿಯನ್ನು ಮತ್ತಷ್ಟು ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲು ಉಪಯುಕ್ತವಾಗಿವೆ.
ಅಸಂಪ್ರದಾಯಿಕ ಇಂಧನಗಳಿಂದ ಗಾಳಿ, ಉಬ್ಬರವಿಳಿತದ ಅಲೆಗಳು, ಜೈವಿಕ ಅನಿಲ, ಸೌರಶಕ್ತಿ ಇವುಗಳ ಉಪಯೋಗವನ್ನು ವಾಣಿಜ್ಯೇತರ ಮತ್ತು ಸಣ್ಣ ಪ್ರಮಾಣದಲ್ಲಿ ಗೃಹ ಉಪಯೋಗಕ್ಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಇವುಗಳನ್ನು ವಾಣಿಜ್ಯ ಉದ್ದೇಶಕ್ಕಾಗಿಯೂ ಶೀಘ್ರದಲ್ಲೆ ಬಳಸುವ ಪ್ರಯತ್ನ ಸಾಗಿದೆ. ಈ ಬಗೆಯ ಇಂಧನ ಭಾರತದ ಕೊರತೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು ಎಂದರು.
ಜಾಥಾದಲ್ಲಿ ವಿದ್ಯುತ್ ಮತು ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಹಾಗೂ ಜಾಥಾದ ಆಯೋಜಕ ಡಾ.ಎಲ್. ಸಂಜೀವ್‌ಕುಮಾರ್, ಸಿದ್ಧಾರ್ಥ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ವಿ.ಕುಮಾರ್, ಮಾಧ್ಯಮ ಕೇಂದ್ರದ ನಿರ್ದೇಶಕ ಡಾ. ಬಿ ಟಿ ಮುದ್ದೇಶ್, ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ.ಎಸ್. ಬಸವರಾಜು, ಎನ್‌ಸಿಸಿ ಕೆಡೆಟ್‌ಗಳು, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಗೂ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.