ಇಂಧನ, ವಿದ್ಯುತ್ ದರ ಏರಿಕೆಗೆ ಸಿದ್ದು ಆಕ್ರೋಶ

ಬೆಂಗಳೂರು, ಜೂ.10- ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿಯಲ್ಲಿದ್ದರೂ ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಹಾಗೂ ಅನಿಲ ದರಗಳನ್ನು ಮನಬಂದಂತೆ ಹೆಚ್ಚಳ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರೀ ಸಾಮಾನ್ಯನ ಮೇಲೆ ಚಪ್ಪಡಿ ಎಳೆದಿದೆ ಎಂದು ವಿಧಾನಸಭೆಯ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ‌ಮಾತನಾಡಿದ ಅವರು, ಪ್ರಧಾನಿಯವರ ಅಚ್ಚೇ ದಿನ ಇದೇನಾ ಎಂದು ತರಾಟೆಗೆ ತೆಗೆದುಕೊಂಡರು.
ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ಶೇ.30 ರಷ್ಟು ವಿದ್ಯುತ್ ದರ ಹೆಚ್ಚಳ ಮಾಡಿದೆ.‌ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ದರ ಏರಿಸಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಆಕ್ರೋಶ ಹೊರಹಾಕಿದರು.
ಇಂಧನ ದರ ಏರಿಕೆ ದುಬಾರಿಯಾಗಿರುವುದನ್ನು ವಿರೋಧಿಸಿ ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ರಾಜ್ಯದಲ್ಲಿ ನಾಳೆಯಿಂದ ಐದು ದಿನಗಳ ಕಾಲ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಕೊರೊನಾ ಸೋಂಕಿತರ ಮರಣ ಪ್ರಮಾಣದ ಅಂಕಿ -ಅಂಶವನ್ನು ನಿಖರವಾಗಿ ನೀಡದೆ ಸತ್ಯಾಂಶ ಮುಚ್ವಿಡುತ್ತಿದೆ ದೂರಿದರು.
ಮೈಸೂರಿನಲ್ಲಿ ನಡೆದಿರುವ ಭೂ ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರಬರಲಿ ಎಂದು ಅವರು ತಿಳಿಸಿದರು.

ಬೆಂಕಿಯಿಲ್ಲದೆ ಹೊಗೆಯಿಲ್ಲ

ಬಿಜೆಪಿ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂಬುದಾಗಿ ರಾಜ್ಯ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅರುಣ್ ಸಿಂಗ್ ಹೇಳಿದ್ದಾರಾದರೂ ಬೆಂಕಿಯಿಲ್ಲದ ಹೊಗೆಯಾಡುವುದಿಲ್ಲ ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ಬದಲಾಯಿಸುವಂತೆ ಕಾಂಗ್ರೆಸ್ ಒತ್ತಾಯಿಸಿಲ್ಲ. ಈ ಬಗ್ಗೆ ದೆಹಲಿಯಲ್ಲಿ ಚರ್ಚೆ ನಡೆಯುತ್ತಿದೆ ಎಂಬುದಾಗಿ ಹೇಳಿದ್ದೆ. ನಾಯಕತ್ವದ ವಿರುದ್ದ ಹೇಳಿಕೆ ನೀಡುತ್ತಿರುವವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.