ಇಂಧನ ಮತ್ತೆ ದುಬಾರಿ

ನವದೆಹಲಿ,ಜೂ.೬-ದಿನದಿಂದ ದಿನಕ್ಕೆ ಇಂಧನ ದರ ಗಗನಕ್ಕೇರುತ್ತಿದೆ. ಇಂದು ಪ್ರತಿ ಲೀಟರ್ ಪೆಟ್ರೋಲ್ ದರ ೨೭ ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ದರ ೩೧ ಪೈಸೆ ಹೆಚ್ಚಳವಾಗಿದೆ. ಈ ಮೂಲಕ ದೇಶದ ವಾಣಿಜ್ಯ ರಾಜದಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ೧೦೧ ರೂ ಗಡಿ ತಲುಪಿದೆ.
ಜೂನ್ ತಿಂಗಳ ಮೊದಲ ವಾರದಲ್ಲಿ ಮೂರು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹೆಚ್ಚಳ ಮಾಡಿವೆ.
ಮುಂಬೈನಲ್ಲಿ ಪೆಟ್ರೋಲ್ ದರ ೧೦೧ ರೂಪಾಯಿ ತಲುಪಿದ್ದು, ಪ್ರತಿ ಲೀಟರ್ ಡೀಸೆಲ್ ದರ ೯೩.೩೦ಪೈಸೆಯಷ್ಟಿದೆ.
ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ೯೮ರೂ ಗಡಿ ದಾಟಿದೆ. ಇಂದಿನ ದರ ಪರಿಷ್ಕರಣೆಯಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ದರ ೯೮.೨೦ ಪೈಸೆ ಹಾಗೂ ಡೀಸೆಲ್ ದರ ೯೧.೧೨ ಪೈಸೆಯಷ್ಟಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ ೯೬.೪೭ ಹಾಗೂ ಡೀಸೆಲ್ ೯೦.೬೬ ಪೈಸೆಯಷ್ಟಿದೆ. ಕೊಲ್ಕತ್ತದಲ್ಲಿ ಪೆಟ್ರೋಲ್ ದರ ೯೫.೦೨ ಹಾಗೂ ಡೀಸೆಲ್ ದರ ೮೮.೮೦ ಪೈಸೆಗೆ ಮಾರಾಟ ಮಾಡಲಾಗುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಹೆಚ್ಚಳವಾಗುತ್ತಿದ್ದಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್,ಡೀಸೆಲ್ ದರ ಪರಿಷ್ಕರಣೆ ಮಾಡುತ್ತಿವೆ. ದೇಶದಲ್ಲಿ ಇಂಧನ ದರ ಗಗನಕ್ಕೇರುತ್ತಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದೆ. ಅದರಲ್ಲೂ ಡೀಸೆಲ್ ದರ ದುಬಾರಿಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.