ಇಂಧನ ಬೆಲೆ ಹೆಚ್ಚಳ ಖಂಡಿಸಿ ವಿನೂತನ ಪ್ರತಿಭಟನೆ

ಹುಬ್ಬಳ್ಳಿ, ಜೂ 10: ಪೆಟ್ರೋಲ್ ಬೆಲೆ 100 ರೂ. ಗಡಿ ಮುಟ್ಟಿದ್ದರಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ ದೊಡವಾ ಅವರು ತಮ್ಮ ವಾಹನಕ್ಕೆ 1ರೂ.(ಒಂದು ರೂಪಾಯಿ) ಪೆಟ್ರೋಲ್ ಹಾಕಿಸುವ ಮೂಲಕ ವಿನೂತನ ಪ್ರತಿಭಟನೆಯನ್ನು ಹುಬ್ಬಳ್ಳಿ ಚನ್ನಮ್ಮ ವೃತ್ತದ ಬಳಿಯ ಪೆಟ್ರೋಲ್ ಬಂಕ್‍ನಲ್ಲಿ ಮಾಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಆಟೋರಿಕ್ಷಾ, ಹಮಾಲಿ ವಾಹನಗಳು, ಟ್ಯಾಕ್ಸಿ ವಾಹನಗಳು, ರೈತಾಪಿ ವರ್ಗದ ಟ್ಯಾಕ್ಟರ್‍ಗಳ ಮಾಲಿಕರು ಇಂಧನದ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಇದೇ ರೀತಿ ಇಂಧನದ ಬೆಲೆ ಮುಂದುವರೆದರೆ ಆಹಾರ ದಿನಸಿ ಬೆಲೆ, ನಿತ್ಯೋಪಯೋಗಿ ವಸ್ತುಗಳ ಬೆಲೆ ಇನ್ನೂ ಗಗನಕ್ಕೇರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ತಕ್ಷಣವೇ ಇಂಧನ ಬೆಲೆ ನಿಯಂತ್ರಣಕ್ಕೆ ಮುಂದಾಗಬೇಕೆಂದು ಈ ಸಂದರ್ಭದಲ್ಲಿ ಹೇಳಿದರು. ಒಂದು ರೂಪಾಯಿ ಪೆಟ್ರೋಲ್ ಖರಿದಿಸುವ ಮೂಲಕ ಸರಕಾರಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು. ನಮ್ಮ ಬಳಿ ನೂರು ರೂಪಾಯಿ ಇಲ್ಲ. ಒಂದು ರೂಪಾಯಿ ಇದೆ. ನಮಗೆ ಪೆಟ್ರೋಲ್ ಕೊಡಿ ಎಂದು ಪೆಟ್ರೋಲ್ ಹಾಕುವ ಕೆಲಸಗಾರರನ್ನು ವಿನಂತಿಸಿದರು. ಇದಕ್ಕೆ ಅನೇಕ ವಾಹನ ಪ್ರಯಾಣಿಕರು ಬೆಂಬಲಿಸಿದರು.