ಇಂಧನ ಬೆಲೆ ಕಡಿಮೆಯಾದರೂ ಕೇಂದ್ರದಿಂದ ಬೆಲೆ ಏರಿಕೆ

ಮೈಸೂರು: ಜೂ.11: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಪೆಟ್ರೋಲ್ ಬಂಕ್‍ಗಳ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ದಾಸಪ್ಪ ವೃತ್ತದ ಪೆಟ್ರೋಲ್ ಬಂಕ್ ಬಳಿ ಜಿಲ್ಲಾ ಕಾಂಗ್ರೆಸ್, ಧನ್ವಂತರಿ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಮಹಿಳಾ ಕಾಂಗ್ರೆಸ್ ಹಾಗೂ ನಗರ ಘಟಕ ಹಾಗೂ ಮಾನಂದವಾಡಿ ರಸ್ತೆಯ ಎನ್‍ಐಇ ಕಾಲೇಜಿನ ಸಮೀಪದ ಪೆಟ್ರೋಲ್ ಬಂಕ್ ಮುಂದೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಕಡಿಮೆಯಾದರೂ, ದೇಶದಲ್ಲಿ ಇಂಧನ ಬೆಲೆಯನ್ನು ಅವರು ಇಳಿಕೆ ಮಾಡಲಿಲ್ಲ ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 110 ಡಾಲರ್ ಇದ್ದರೂ ಅವರು ಇಲ್ಲಿ ಬೆಲೆ ಏರಿಸಿರಲಿಲ್ಲ. ಈಗ ಬೆಲೆ 40 ಡಾಲರ್ ಆಗಿದ್ದರೂ ಬಿಜೆಪಿ ಸರ್ಕಾರ ಬೆಲೆ ಇಳಿಕೆ ಮಾಡದೇ ಏರಿಕೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಪಾಲಿಕೆ ಮೇಯರ್ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಚುನಾವಣೆ ಸಂಬಂಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಪಕ್ಷದ ಪಾಲಿಕೆ ಸದಸ್ಯರಿಗೆ ಷೋಕಾಸ ನೋಟಿಸ್ ನೀಡಲಾಗುವುದು. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅವರು ಪಕ್ಷದ ಅನುಮತಿ ಪಡೆದುಕೊಂಡಿರಲಿಲ್ಲ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಪ್ರತಿಕ್ರಿಯಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.