ಇಂಧನ ಬೆಲೆ ಏರಿಕೆ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ

ದೇವದುರ್ಗ.ಜೂ.೧೦- ಕರೊನಾ ಸಂಕಷ್ಟ ಸಮಯದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡಿಸೆಲ್ ಬೆಲೆ ಹೆಚ್ಚಿಸಿರುವುದನ್ನು ಖಂಡಿಸಿ ತಾಲೂಕಿನ ಜಾಲಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಿಪಿಐ(ಎಂ) ತಾಲೂಕು ಘಟಕದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.
ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋವಿಡ್ ಸಂಕಷ್ಟ ಸಮಯದಲ್ಲಿ ಪೆಟ್ರೋಲ್, ಡಿಸೆಲ್, ಅಡುಗೆ ಅನಿಲ ಸೇರಿ ವಿವಿಧ ಇಂಧನ ಬೆಲೆ ಹೆಚ್ಚಿಸುವ ಮೂಲಕ ಜನಸಾಮಾನ್ಯ ಜೀವದ ಜತೆ ಚೆಲ್ಲಾಟವಾಡುತ್ತಿದೆ.
ಕರೊನಾ ಮೊದಲ ಅಲೆ ಬಂದಾಗ ಎರಡು ತಿಂಗಳು ಹಾಗೂ ಎರಡನೇ ಅಲೆ ಬಂದಾಗ ಎರಡು ತಿಂಗಳು ರಾಜ್ಯ ಸೇರಿ ದೇಶದಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಈ ಸಮಯದಲ್ಲಿ ಬಡವರು, ಕೂಲಿಕಾರರು, ರೈತರು ಕೆಲಸವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ಸಮಯದಲ್ಲಿ ಇಂಧನ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ. ಇಂಧನ ಬೆಲೆ ಏರಿಕೆಯಿಂದ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗಿ ಜನರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ದೂರಿದರು.
ಕೂಡಲೇ ಇಂಧನ ಬೆಲೆ ಇಳಿಕೆ ಮಾಡಿ, ಅಡುಗೆ ಅನಿಲಗೆ ಸಬ್ಸಿಡಿ ಹೆಚ್ಚಿಸಿ, ಬೆಲೆ ಕಡಿಮೆ ಮಾಡಬೇಕು. ಬಡವರಿಗೆ ಕರೊನಾ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.
ಈಸಂದರ್ಭದಲ್ಲಿ ಮುಖಂಡರಾದ ನರಸಣ್ಣ ನಾಯಕ, ಗುರು ನಾನಕ್, ಮೌನೇಶ ದಾಸರ್, ಹನುಮಂತ ಮಡಿವಾಳ, ಮುಕ್ತಮ್, ರಾಜಶೇಖರ, ದುರುಗಪ್ಪ ಹೊರಟ್ಟಿ ಸೇರಿದಂತೆ ಇತರರಿದ್ದರು.