ಇಂಧನ ದರ ಏರಿಕೆ ಖಂಡಿಸಿ ಜೂ.೧೧ ಕಾಂಗ್ರೆಸ್ ಪ್ರತಿಭಟನೆ


ನವದೆಹಲಿ, ಜೂ.೯-ಪೆಟ್ರೋಲ್ ಡೀಸೆಲ್ ದರ ಗಗನಕ್ಕೇರಿರುವುದನ್ನು ಖಂಡಿಸಿ ಪ್ರತಿ ಪಕ್ಷ ಕಾಂಗ್ರೆಸ್ ಜೂ.೧೧ ದೇಶಾದ್ಯಂತ ಪೆಟ್ರೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಹಲವು ರಾಜ್ಯಗಳಲ್ಲಿ ಪೆಟ್ರೋಲ್ ದರ ೧೦೦ ರೂ ಗಡಿ ದಾಟಿದೆ. ಡೀಸೆಲ್ ದರ ದುಬಾರಿಯಾಗಿದ್ದು, ಅಗತ್ಯ ವಸ್ತುಗಳ ದರ ಏರಿಕೆಯಾಗಿ ಕೋವಿಡ್‌ನಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂಧನ ದರ ಏರಿಕೆಯನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡು ಕಾಂಗ್ರೆಸ್ ಕೇಂದ್ರದ ವಿರುದ್ಧ ಸಮರ ಸಾರಲು ಮುಂದಾಗಿದೆ.ದಿನೇ ದಿನೇ ದರ ಏರಿಕಯಾಗುತ್ತಿದ್ದರೂ ಅದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ದೂರಿದೆ.
ದರ ಹೆಚ್ಚಳದಿಂದಾಗಿ ಜನರು ಕಂಗಲಾಗಿದ್ದಾರೆ. ಮೇ ೪ ರಿಂದ ಇದುವರೆಗೆ ೨೦ ಬಾರಿ ಪೆಟ್ರೋಲ್-ಡೀಸೆಲ್ ದರ ಪರಿಷ್ಕರಣೆ ಮಾಡಲಾಗಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸೇರಿದಂತೆ ದೇಶದಲ್ಲಿ ಪೆಟ್ರೋಲ್ ೧೦೦ರೂ ಗಡಿದಾಟಿದೆ ಎಂದು ಆರೋಪಿಸಿದೆ.
ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಬಂದಿದೆ. ಈಗ ಇಂಧನ ದರ ಏರಿಕೆಯನ್ನು ಮುಂದಿಟ್ಟುಕೊಂಡು ದೇಶದ ಗಮನ ಸೆಳೆಯಲು ಪಕ್ಷದ ನಾಯಕರು ಸಜ್ಜಾಗಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಗಣನೀಯ ಪ್ರಮಾಣದಲ್ಲಿ ಹೆಚ್ಚಳದಿಂದಾಗಿ ಇಂಧನ ದರ ಏರಿಕೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ದರ ಏರಿಕೆ ನಿಯಂತ್ರಣಕ್ಕೆ ಸಂಬಂಧಪಟ್ಟ ರಾಜ್ಯಗಳು ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವಂತೆ ಮಾಡಿರುವ ಸಲಹೆಯನ್ನು ಎಲ್ಲ ರಾಜ್ಯಗಳು ತಿರಸ್ಕರಿಸಿವೆ. ಇದರ ನೇರ ಪರಿಣಾಮ ಬಡ ಹಾಗೂ ಮಧ್ಯಮ ವರ್ಗದವರಿಗೆ ತಟ್ಟಿದೆ.
ಕರ್ನಾಟಕದಲ್ಲೂ ಇಂಧನದ ಮೇಲೆ ವಿಧಿಸಲಾಗುತ್ತಿರುವ ತೆರಿಗೆ ಯನ್ನು ಕಡಿಮೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.