ಇಂಧನ ಕ್ಷೇತ್ರದ ಸಮಸ್ಯೆಗೆ ಹೊಸ ಆವಿಷ್ಕಾರ ಪರಿಹಾರ

ತುಮಕೂರು, ಸೆ. ೧೬- ಇಂಧನ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳಿಗೆ ಉತ್ತಮವಾದ ಆವಿಷ್ಕಾರಗಳೇ ಪರಿಹಾರವಾಗುತ್ತವೆ. ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳುವ ಹೊಸ ಆವಿಷ್ಕಾರಗಳು ನಡೆಯಬೇಕು ಎಂದು ಬೆಂಗಳೂರಿನ ಇಂಧನ ಕ್ಷೇತ್ರದ ಸಲಹೆಗಾರರಾದ ಡಾ. ಎ. ನರೇಂದ್ರನಾಥ್ ಉಡುಪ ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪಿಜಿ ಸಭಾಂಗಣದಲ್ಲಿ ಶಿಕ್ಷಣ ಶಿಲ್ಪಿ ಡಾ. ಗಂಗಾಧರಯ್ಯ ರವರ ಹೆಸರಿನ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಘಟಕದ ವತಿಯಿಂದ ಏರ್ಪಡಿಸಿ ‘ಗುಣಮಟ್ಟದ ನಾವೀನ್ಯತೆಯನ್ನು ಹೇಗೆ ಆವಿಷ್ಕರಿಸುವುದು’ [ಕಿuಚಿಟiಣಥಿ ಜಿಡಿom iಟಿಟಿovಚಿಣioಟಿ ಠಿeಡಿsಠಿeಛಿಣive] ಎಂಬ ವಿಷಯ ಕುರಿತು ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲಿಯೂ ಉತ್ತಮವಾದ ಯೋಚನೆಗಳು, ಆಲೋಚನೆಗಳು ಮೂಡುತ್ತವೆ. ಅವುಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡಾಗ ಆ ಯೋಚನೆ, ಆಲೋಚನೆಗಳು ಇನ್ನೂ ಅತ್ಯುತ್ತಮಗೊಳ್ಳುತ್ತವೆ ಹಾಗೂ ಅನ್ವೇಷಣೆಗಳು ಉತ್ತಮವಾದ ಫಲಿತಾಂಶ ನೀಡುತ್ತವೆ ಎಂದರು.
ಯಾವ ಸಂಸ್ಥೆಯಲ್ಲಿ ಉತ್ತಮವಾದ ಅನ್ವೇಷಣೆಗಳು ಹೊರಬರುತ್ತವೆಯೋ ಆ ವಲಯದ ಕಡೆ ಇಡೀ ವಿಶ್ವವೇ ತಿರುಗಿ ನೋಡುತ್ತದೆ. ಗುಣಮಟ್ಟವುಳ್ಳ ಆವಿಷ್ಕಾರ ಸಮಾಜದಲ್ಲಿ ಉತ್ತಮವಾದ ಬೆಲೆ ಮತ್ತು ಮಾನ್ಯತೆಯನ್ನು ಪಡೆದುಕೊಳ್ಳುತ್ತದೆ ಎಂದು ಹೇಳಿದರು.
ಪ್ರತಿಯೊಂದು ಕ್ಷೇತ್ರದಲ್ಲಿಯೂ ಅನ್ವೇಷಣೆ ಎಂಬುವುದು ಇದೆ. ಆ ಅನ್ವೇಷಣೆಯೂ ಎಷ್ಟರ ಮಟ್ಟಿಗೆ ಗುಣಮಟ್ಟವಾಗಿರುತ್ತದೆ ಎಂಬುದು ಬಹು ಮುಖ್ಯ. ಆವಿಷ್ಕಾರ ಗುಣಮಟ್ಟ ಯಾವ ರೀತಿ ಇರಬೇಕು ಮತ್ತು ಯಾವ ಕ್ಷೇತ್ರಗಳಲ್ಲಿ ಅನ್ವೇಷಣೆಗಳು ಹೇಗೆ ನಡೆಯಬೇಕು ಎಂಬ ಕುರಿತು ಮಾಹಿತಿಗಳನ್ನು ಪ್ರಾಧ್ಯಾಪಕರೊಂದಿಗೆ ಹಂಚಿಕೊಂಡರು
ಕಾರ್ಯಕ್ರಮದಲ್ಲಿ ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ರವಿಪ್ರಕಾಶ್, ಪರೀಕ್ಷಾಂಗ ಕುಲಸಚಿವ ಕರುಣಾಕರ್, ಡೀನ್ ಡಾ. ಎಂ.ಸಿದ್ದಪ್ಪ, ಐಕ್ಯೂ ಘಟಕದ ಮುಖ್ಯ ಸಂಚಾಲಕ ಪ್ರೊ.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಸಹಾಯಕ ಪಾಧ್ಯಾಪಕರಾದ ಪ್ರದೀಪ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.