ಇಂಧನ ಉಳಿಸಲು ಸೈಕಲ್ ಬಳಕೆ ಹೆಚ್ಚಿಸಬೇಕು

 ಚಿತ್ರದುರ್ಗ. ಏ.೪; ರಸ್ತೆಯ ಮೇಲೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪೆಟ್ರೋಲ್ ಡೀಸೆಲ್‌ಗಳ ಬಳಕೆ ಮುಗಿಲು ಮುಟ್ಟಿದ್ದು, ಮಾಲಿನ್ಯಕ್ಕೆ ಕಾರಣವಾಗಿದೆ, ಅದನ್ನು ತಡೆಯಲು ನಾವು ಹೆಚ್ಚೆಚ್ಚು ಸೈಕಲ್ ಬಳಕೆಯನ್ನು ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.ಅವರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ವಿಜ್ಞಾನ ಕೇಂದ್ರ ಮತ್ತು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆದೇಹಳ್ಳಿ, ಸಂಯುಕ್ತವಾಗಿ ಆಯೋಜಿಸಿದ್ದ ಇಂಧನ ಉಳಿಸಿ ಸೈಕಲ್ ಬಳಸಿ ಎಂಬ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಣ್ಣ ಕೆಲಸಗಳಿಗೂ ಸಹ ಪೆಟ್ರೋಲ್ ಡೀಸೆಲ್ ಬಳಕೆ ಮಾಡಿ ಸಂಚರಿಸುತ್ತಿರುವುದರಿಂದ ವಾಯು ಮಾಲಿನ್ಯ ಹೆಚ್ಚಾಗಿ, ಇಂಗಾಲದ  ಪ್ರಮಾಣ ಹೆಚ್ಚಾಗಿ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ, ಜನಸಾಮಾನ್ಯರಿಗೆ ಸೈಕಲ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿ, ಸೈಕಲ್ ಸವಾರಿ ಕೀಳರಿಮೆ ಎಂಬುದನ್ನ ನಾವು ತೊಡೆದು ಹಾಕಬೇಕಾಗಿದೆ ಎಂದರು.ಮಕ್ಕಳಿಗೆ ನಗರದೊಳಗೆ ಸಂಚರಿಸಲು ಉತ್ತಮವಾದದ್ದು ಸೈಕಲ್, ಸೈಕಲ್ಲಿನ ಬೆಲೆಯು ಸಹ ಗಗನಕ್ಕೇರುತ್ತಿದ್ದು ಬಡವರ ಕೈಗೆ ನಿಲುಕದಂತಾಗಿದೆ. ಸೈಕಲ್ ಬೆಲೆಗಳನ್ನು ಇಳಿಸಿ, ದಿನ ನಿತ್ಯ ಪ್ರತಿಯೊಬ್ಬರೂ ಸೈಕಲ್ ಬಳಸುವಂತಾದರೆ ಮಾಲಿನ್ಯ ಕಡಿಮೆಯಾಗಿ, ಪೆಟ್ರೋಲ್ ಡೀಸೆಲ್‌ನ ಉಳಿತಾಯವೂ ಆಗುತ್ತದೆ. ಅದರ ಬೆಲೆ ಇಳಿಕೆಗೆ ಸಹಾಯವಾಗುತ್ತದೆ ಎಂದರು. ವಿಜ್ಞಾನ ಕೇಂದ್ರದ ಕಾರ್ಯದರ್ಶಿ ನವೀನ್. ಪಿ. ಆಚಾರ್. ಮಾತನಾಡುತ್ತಾ ಮಕ್ಕಳಿಗೆ ಶಾಲೆಯಲ್ಲಿಯೇ ಪರಿಸರದ ತರಬೇತಿ ನೀಡಬೇಕು, ಮಕ್ಕಳು ಶಾಲೆಯಿಂದ ಹೊರಹೋದಾಗ ಅವುಗಳನ್ನ ಅನುಷ್ಠಾನಗೊಳಿಸಲು ಸುಲಭವಾಗುವುದು. ಹೊರದೇಶದಿಂದ ದುಪ್ಪಟ್ಟು ಹಣ ಕೊಟ್ಟು ಪೆಟ್ರೋಲ್ ಡೀಸೆಲ್‌ಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ, ದೇಶದ ಆರ್ಥಿಕತೆಯ ಮೇಲೆ ಹೊಡೆತ ಬೀಳುತ್ತಿದೆ. ಸಣ್ಣ ಸಣ್ಣ ಕೆಲಸಗಳಿಗೂ ನಾವು ಅಗಾಧವಾದ ಯಂತ್ರಗಳನ್ನು, ವಾಹನಗಳನ್ನ ಬಳಸಿ ಪೆಟ್ರೋಲ್‌ನ ದುಂದು ವೆಚ್ಚ ಮಾಡುತ್ತಿದ್ದೇವೆ ಎಂದರು. ಮಕ್ಕಳು ಉತ್ಸಾಹದಿಂದ ಸೈಕಲ್‌ಗಳನ್ನ ಬೆಳಿಗ್ಗೆಯಿಂದಲೇ ತೊಳೆದು ತಯಾರಿ ಮಾಡಿಟ್ಟುಕೊಂಡು, ಮೆದೇಹಳ್ಳಿ ಗ್ರಾಮದ ಮುಖ್ಯರಸ್ತೆಗಳಲ್ಲಿ ಸಂಚರಿಸಿ, ಜನರಿಗೆ ಸೈಕಲ್ ಬಳಕೆ ಮಾಡಿ ಇಂಧನ ಉಳಿಸಿ, ಹೆಲ್ಮೆಟ್ ಧರಿಸಿ ಗಾಡಿ ಚಲಾಯಿಸಿ, ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಎಂದು ಘೋಷಣೆ ಕೂಗುತ್ತಾ ಜನಜಾಗೃತಿ ಮೂಡಿಸಿದರು. ಹಾಗೆಯೇ ಕರೋನ ಪಿ.ಇ.ಟಿ.ಕಿಟ್ ವೇಷಧಾರಿಯಾದ ವಿದ್ಯಾರ್ಥಿಗಳು ಜನರಲ್ಲಿ ಸಾಮಾಜಿಕ ಅಂತರ, ಮಾಸ್ಕ್ನ ಮಹತ್ವ ಮನದಟ್ಟು ಮಾಡಿಕೊಟ್ಟರು.ಮುಖ್ಯ ಶಿಕ್ಷಕರಾದ ಟಿ. ಷಣ್ಮುಖಪ್ಪನವರು, ಸ.ಶಿ. ಜಿ. ಎನ್, ಅಜ್ಜಪ್ಪ, ಸುಧಾ.ಡಿ.ಕೆ. ಚಮನ್.ಬಿ. ವಿಜಯಮ್ಮ.ಡಿ. ಪುಷ್ಪಲತಾ ಮುಂತಾದವರು ಹಾಜರಿದ್ದರು.