ಇಂದ್ರಧನುಷ 3ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ 0.5 ವರ್ಷದಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ. ಅ.8: ಮಿಷನ್ ಇಂದ್ರಧನುಷ 5.0 ಅಭಿಯಾನದ ಮೂರನೆ ಸುತ್ತಿನ ಲಸಿಕಾ ಅಭಿಯಾನ ಕಾರ್ಯಕ್ರಮ ಬೀದರ ಜಿಲ್ಲೆಯಲ್ಲಿ ಅಕ್ಟೋಬರ್ 9 ರಿಂದ 14 ರವರೆಗೆ ಹಮ್ಮಿಕೊಂಡಿದ್ದು ಈ ಅಭಿಯಾನದಲ್ಲಿ 0.5 ವರ್ಷದ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಮತ್ತು ಯಾವುದೇ ಮಕ್ಕಳು ಬಿಟ್ಟು ಹೋಗದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದದ ಮೂಲಕ ಪರಿಣಾಮಕಾರಿ ಮಿಷನ್ ಇಂದ್ರಧನುಷ 5.0 ಅಭಿಯಾನ 3ನೇ ಸುತ್ತಿನ ಲಸಿಕಾ ಅಭಿಯಾನ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ಮಾತನಾಡಿದರು

ಗರ್ಭಿಣಿ ಸ್ತ್ರೀಯರು ಮತ್ತು 0.5 ವರ್ಷದ ಒಳಗಿನ ಮಕ್ಕಳು ಯಾವುದೇ ಲಸಿಕೆ ಪಡೆಯದವರು ಮಿಷನ್ ಇಂದ್ರಧನುಷ ಮೂರನೆ ಸುತ್ತಿನಲ್ಲಿ ಲಸಿಕೆಯನ್ನು ತಮ್ಮ ಸಮೀಪದ ಲಸಿಕಾ ಕೇಂದ್ರಗಳಿಗೆ ಹೊಗಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಈ ಅಭಿಯಾನದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.

ತಾಲ್ಲೂಕು ಮಟ್ಟದಲ್ಲಿ ತಹಶಿಲ್ದಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಸೇರಿಕೊಂಡು 3ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ ಯಾವುದೇ ಮಗು ಬಿಟ್ಟು ಹೋಗದಂತೆ ಯೋಜನೆ ರೂಪಿಸುವ ಮೂಲಕ ಸರಿಯಾಗಿ ಮೇಲ್ವಿಚಾರಣೆ ಮಾಡಬೇಕೆಂದರು.

ಈಗಾಗಲೇ ಒಂದು ಮತ್ತು ಎರಡನೇ ಸುತ್ತಿನ ಇಂದ್ರಧನುಷ ಲಸಿಕಾ ಅಭಿಯಾನ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಮೂರನೇ ಸುತ್ತಿನಲ್ಲಿ ಯಾವುದೇ ಮಗು ಉಳಿಯದಂತೆ ನೋಡಿಕೊಳ್ಳಬೇಕು ಆರೋಗ್ಯ ಇಲಾಖೆಯ ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗನವಾಡಿ ಸಹಾಯಕಿಯರು ಮತ್ತು ಇತರೆ ಇಲಾಖೆಯ ಸಹಕಾರದೊಂದಿಗೆ ಈ ಅಭಿಯಾನ ಯಶಸ್ವಿಗೊಳಿಸಬೇಕೆಂದರು.

ಹುಮನಾಬಾದ ಮತ್ತು ಬೀದರ ತಾಲ್ಲೂಕುಗಳಲ್ಲಿ ಮಾತ್ರ ಈ ಹಿಂದೆ ಲಸಿಕೆ ಹೆಚ್ಚು ಹಾಕಲಾಗಿದ್ದು ಇನ್ನುಳಿದ ತಾಲ್ಲೂಕಿನಲ್ಲಿ ಇದರ ಪ್ರಮಾಣ ಕಡಿಮೆಯಾಗಿದ್ದು ಮೂರನೆ ಸುತ್ತಿನಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಮಕ್ಕಳಿಗೆ ಹೆಚ್ಚಿನ ಲಸಿಕೆ ಹಾಕುವಂತಾಗಬೇಕು ಮತ್ತು ತಮಗೆ ಸಿಬ್ಬಂದಿಗಳ ಕೊರತೆ ಇದ್ದರೆ ಲಸಿಕಾ ಅಭಿಯಾನದ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಹೊರ ಗುತ್ತಿಗೆಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದರು.

ಒಂದು ಮತ್ತು ಎರಡನೆ ಸುತ್ತಿನಲ್ಲಿ ಬಿಟ್ಟು ಹೋದ ಮಕ್ಕಳಿಗಾಗಿಯೇ ಮೂರನೇ ಸುತ್ತಿನ ಇಂದ್ರಧನುಷ ಲಸಿಕಾ ಅಭಿಯಾನ ಅಕ್ಟೋಬರ್ 9 ರಿಂದ 14 ರವರೆಗೆ ಹಮ್ಮಿಕೊಳ್ಳಲಾಗಿದ್ದು ಇದನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಸರಿಯಾಗಿ ಸೂಪರವೈಜ ಮಾಡಬೇಕು ಮತ್ತು ಜಿಲ್ಲೆಯ ಎಲ್ಲಾ ಸಾರ್ವಜನಿಕರು ಇಂದ್ರಧನುಷ ಲಸಿಕಾ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಎಂ. ಮಾತನಾಡಿ, ಲಸಿಕಾ ಅಭಿಯಾನದ ಸಂದರ್ಭದಲ್ಲಿ ವೈದ್ಯಕೀಯ ಅಧಿಕಾರಿಗಳು ಎಲ್ಲಾ ಕಡೆಗೆ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಹೇಗೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಪಡೆಯುವದರ ಜೊತೆಗೆ ಸ್ಥಳೀಯವಾಗಿಯು ಮೇಲ್ವಿಚಾರಣೆ ಸರಿಯಾಗಿ ಮಾಡಬೇಕೆಂದರು.

ಈ ಸಭೆಯಲ್ಲಿ ಜಿಲ್ಲಾ ಅರ್.ಸಿ.ಎಚ್ ಅಧಿಕಾರಿ ಡಾ. ಶಿವಶಂಕರ ಬಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರಾದ ಪ್ರಭಾಕರ್, ಎಸ್.ಎಮ್.ಡಾ.ಅನಿಲಕುಮಾರ ತಾಳಿಕೋಟಿ, ಡಾ.ರಾಜಶೇಖರ ಪಾಟೀಲ, ಡಾ. ಕಿರಣ ಪಾಟೀಲ್, ಡಾ.ಅನೀಲ ಚಿಂತಾಮಣಿ, ಡಾ.ದೀಪಾ ಖಂಡ್ರೆ, ಡಾ. ರಾಜಶೇಖರ ಪಾಟೀಲ್, ತಹಶಿಲ್ದಾರರು, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.