
ಮಧುಗಿರಿ, ಆ. ೯- ಇಂದ್ರಧನುಷ್ ಲಸಿಕೆ ಸಪ್ತಾಹದ ಅಡಿಯಲ್ಲಿ ತಾಲ್ಲೂಕಿನ ೨೫ ಗರ್ಭಿಣಿಯರಿಗೆ ೨೦೨ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಮೇಶ್‌ಬಾಬು ಹೇಳಿದರು.
ಲಿಂಗೇನಹಳ್ಳಿ ಬಡಾವಣೆಯ ನಮ್ಮ ಕ್ಲಿನಿಕ್‌ನಲ್ಲಿ ಇಂದ್ರಧನುಷ್ ಲಸಿಕೆ ನೀಡುವ ಸಪ್ತಾಹ, ಪೌಷ್ಟಿಕ ಆಹಾರ ಮತ್ತು ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲಸಿಕೆ ಹಾಕುವುದರಿಂದ ಆರೋಗ್ಯವಂತ ಮಕ್ಕಳನ್ನು ಕಾಣಲು ಸಾಧ್ಯ.ಮಕ್ಕಳು ಆರೋಗ್ಯವಂತರಾಗಲು ಮತ್ತು ಸದೃಢರಾಗಲು ಮಕ್ಕಳಿಗೆ ಸ್ತನ್ಯಪಾನ ಅಗತ್ಯ. ಈ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಲು ಸ್ತನ್ಯಪಾನ ಸಪ್ತಾಹ ನಡೆಸಲಾಗುತ್ತಿದೆ ಎಂದರು.
ಬಾಟಲ್ ಹಾಲಿನಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗಲಿದೆ.ಅಲ್ಲದೆ ತಾಯಂದಿರಿಗೆ, ಗರ್ಭಿಣಿಯರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅನ್ನಪೂರ್ಣ ಯೋಜನೆ ಅಡಿಯಲ್ಲಿ ನೀಡುವ ಪೌಷ್ಟಿಕ ಆಹಾರ ನಡೆಯುತ್ತಿದ್ದು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಧರಣೀಶ್‌ಗೌಡ ಮಾತನಾಡಿ, ಮಹಿಳೆಯರಲ್ಲಿ ಅಕ್ಷರ ಜ್ಞಾನ ಹೆಚ್ಚಾದಂತೆಲ್ಲ ಆಚಾರ ವಿಚಾರ ಮರೆಯುತ್ತಿದ್ದಾರೆ.
ಅವೈಜ್ಞಾನಿಕತೆಯಿಂದಾಗಿ ಶಿಶು ಮರಣ ಹೆಚ್ಚಾಗುತ್ತಿದೆ. ಕಡ್ಡಾಯವಾಗಿ ಎರಡು ವರ್ಷ ಮಕ್ಕಳಿಗೆ ಸ್ನಾನ ಮಾಡಿಸಬೇಕು ಇಲ್ಲದಿದ್ದರೆ ಮಕ್ಕಳಲ್ಲಿ ಬೊಜ್ಜುತನ ಬರುತ್ತದೆ. ಪೌಷ್ಟಿಕ ಆಹಾರ ಆರೋಗ್ಯವಂತ ಮಕ್ಕಳ ಭದ್ರ ಬುನಾದಿ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯೆ ಶಹೀನಾ ಕೌಸರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನಾಗಭೂಷಣ್, ಆರೋಗ್ಯ ಇಲಾಖೆಯ ಸಿಬ್ಬಂದಿ ಪುಟ್ಟಮ್ಮ, ಭಾರತೀಯ ನವೀನ್ ಮಕ್ಕಳ ತಜ್ಞರಾದ ಡಾ. ಇಂದಿರಾ, ಡಾ. ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು