ಇಂದ್ರಧನುಷ್ 5-0 ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ


(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಆ.9: ಪಟ್ಟಣದ ಬಸ್ತಿ ಬಣದ ಬನಶಂಕರಿ ದೇವಸ್ಥಾನದಲ್ಲಿ ಸೋಮವಾರ ಗದಗ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕ ಪಂಚಾಯತಿ ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರ ಲಕ್ಷ್ಮೇಶ್ವರ ಮತ್ತು ಸಿಡಿಪಿ ಓ ಇಲಾಖೆ ಶಿರಹಟ್ಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದ್ರ ಧನುಷ್ 5.0 ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುನೀಲ್ ಮಹಾಂತ ಶೆಟ್ಟರ್ ಅವರು ಐದು ವರ್ಷದೊಳಗಿನ ಮಕ್ಕಳಿಗೆ ಬರುವ ಅನೇಕ ರೋಗಗಳಿಗೆ ರೋಗ ನಿರೋಧಕ ಶಕ್ತಿಯನ್ನು ಉಂಟುಮಾಡುವ ಸರಕಾರದ ಅತ್ಯಂತ ಮಹತ್ವಕಾಂಕ್ಷಿ ಇಂದ್ರಧನು ಷ ಯೋಜನೆಯನ್ನು ಎಲ್ಲರೂ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅವರು ಸರ್ಕಾರ ಐದು ವರ್ಷದೊಳಗಿನ ಮಕ್ಕಳಿಗೆ ರೋಗ ನಿರೋಧಕ ಶಕ್ತಿಯ ಲಸಿಕೆಯನ್ನು ಹಾಕುತ್ತಿದ್ದು ಇದಕ್ಕೆ ಸಿಡಿಪಿ ಓ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಮೂಲಕ ಒಂದು ತಿಂಗಳ ಕಾಲ ಈ ಯೋಜನೆಯನ್ನು ಕೈಗೊಳ್ಳಲಿದ್ದಾರೆ ಎಂದರು.
ಸಿಡಿಪಿ ಓ ಇಲಾಖೆಯ ಅಧಿಕಾರಿ ಮೃತ್ಯುಂಜಯ ಗುಡ್ಡದ ಅನ್ವೇರಿಯವರು ಮಾತನಾಡಿ ತಮ್ಮ ಇಲಾಖೆಯು ಮನೆಮನೆಯಲ್ಲಿ ಸಮೀಕ್ಷೆ ಮಾಡಿ ಗರ್ಭಿಣಿ ಸ್ತ್ರೀಯರಿಗೆ ಮತ್ತು ಐದು ವರ್ಷದ ಮಕ್ಕಳಿಗೆ ಎಲ್ಲ ರೀತಿಯ ರೋಗ ನಿರೋಧಕ ಗಳನ್ನು ನೀಡುತ್ತಿದ್ದಾರೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಶ್ರೀಕಾಂತ ಕಾಟೆ ವಾಲಿಯವರು ಪ್ರಾಸ್ತಾವಿಕವಾಗಿ ಇಂದ್ರಧನುಷ್ ಕಾರ್ಯಕ್ರಮದ ಸಮಗ್ರ ವಿವರಣೆ ನೀಡಿದರು.
ಅಧ್ಯಕ್ಷತೆಯನ್ನು ಪುರಸಭಾ ಸದಸ್ಯರಾದ ಮಹದೇವಪ್ಪ ಅಣ್ಣಿಗೇರಿ ವಹಿಸಿದ್ದರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ಬಿಎಸ್ ಹಿರೇಮಠ ಸಿಡಿ ಪಿಓ ಇಲಾಖೆಯ ಎನ್ಕೆ ನವಿಲೆ ರೂಪ ಕಟ್ಟಿಮನಿ ನಿರ್ವಹಿಸಿದರು.