ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಚಾಲನೆ

ಚಿಕ್ಕನಾಯಕನಹಳ್ಳಿ, ಆ. ೧೨- ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಶಾಸಕ ಸಿ.ಬಿ. ಸುರೇಶ್‌ಬಾಬು ಚಾಲನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ನಡೆದ ಮಿಷನ್ ಇಂದ್ರಧನುಷ್-೫ ಅಭಿಯಾನವನ್ನು ಮಗುವಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹುಟ್ಟುವ ಪ್ರತಿ ಮಕ್ಕಳು ಆರೋಗ್ಯವಂತರಾಗಬೇಕು. ದೇಹದಲ್ಲಿ ರೋಗ ನಿರೊಧಕ ಶಕ್ತಿ ತುಂಬುವ ಮೂಲಕ ಇತರೆ ಯಾವುದೇ ಸೋಂಕು ಹಾಗೂ ಸಾಂಕ್ರಮಿಕ ರೋಗಗಳಿಗೆ ಬಲಿಯಾಗಬಾರದೆಂಬ ಉದ್ದೇಶದಿಂದ ಕೈಗೊಳ್ಳುತ್ತಿರುವ ಇಂದ್ರಧನುಷ್ ಲಸಿಕಾ ಕಾರ್ಯಕ್ರಮವು ಸಂಪೂರ್ಣ ಯಶಸ್ವಿಯಾಗಬೇಕು ಎಂದರು.
ಲಸಿಕೆಯಿಂದ ವಂಚಿತವಾದ ಮಕ್ಕಳನ್ನು ಈಗಾಗಲೇ ಗುರುತಿಸಿದ್ದು ಮುಂದಿನ ಮೂರು ತಿಂಗಳಲ್ಲಿ ಎಲ್ಲ ಮಕ್ಕಳಿಗೂ ಲಸಿಕೆ ಹಾಕುವ ಮೂಲಕ ಶೇ.೧೦೦ ಸಾಧನೆ ಮಾಡುವಲ್ಲಿ ಆರೋಗ್ಯ ಸಿಬ್ಬಂದಿ ಯಶಸ್ವಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ದಿಲೀಪ್, ಆರೋಗ್ಯಾಧಿಕಾರಿ ನಟರಾಜ್, ಡಾ. ಕುಮಾರಸ್ವಾಮಿ, ರಾಜೇಂದ್ರ ಪ್ರಸಾದ್, ಪುರಸಭಾ ಸದಸ್ಯರಾದ ಪುಷ್ಪ, ಸಿ.ಡಿ.ಸುರೇಶ್, ಆರೋಗ್ಯಇಲಾಖೆಯ ಸಿಬ್ಬಂದಿಗಳಾದ ರಂಗನಾಥ್, ರೇಣುಕಮ್ಮ, ಶ್ರೀನಿವಾಸ್, ನಿರೂಪ್‌ರಾವತ್ ಮತ್ತಿತರರು ಉಪಸ್ಥಿತರಿದ್ದರು.