ಇಂದ್ರಧನುಷ್ ಲಸಿಕಾ ಅಭಿಯನ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.12:  ವಯೋಮಾನದ ಮಕ್ಕಳಿಗೆ ನಿಗದಿಪಡಿಸಿದ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು. ಒಂದು ವೇಳೆ ಲಸಿಕೆ ಹಾಕಿಸದಿದ್ದಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನ ಪ್ರಾರಂಭಿಸಲಾಗಿದ್ದು, ಈ ಸಮಯದಲ್ಲಿ ಲಸಿಕೆಗಳನ್ನು ಹಾಕಿಸುವ ಮೂಲಕ ಮಕ್ಕಳನ್ನು ರೋಗಗಳಿಂದ ಮುಕ್ತರಾಗಿಸಬೇಕು ಎಂದು ಸಿರುಗುಪ್ಪ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ ಈರಣ್ಣ ಹೇಳಿದರು.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಬೋಯಕೇರಿಯ 5ನೇ ಅಂಗನವಾಡಿ ಕೇಂದ್ರದಲ್ಲಿ ನಡೆದ ಇಂದ್ರ ಧನುಷ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದ್ರಧನುಷ್ ಲಸಿಕಾ ಅಭಿಯಾನದಡಿ ಪೊಲಿಯೋ, ಡಿಪ್ತೀರಿಯಾ, ನಾಯಿಕೆಮ್ಮು, ಧನುರ್ವಾಯು, ಕ್ಷಯರೋಗ, ದಡಾರ, ಮೇನಿಂಜೈಟಿಸ್, ಹೆಪಟೈಟಿಸ್ ಬಿ, ರುಬೇಲಾ ಲಸಿಕೆಗಳನ್ನು ಹಾಕಲಾಗುತ್ತಿದೆ. 0-5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಕೊಡಿಸಬೇಕು. ಇದರಿಂದ ವಿವಿಧ ರೋಗಗಳಿಂದ ಮಕ್ಕಳನ್ನು ರಕ್ಷಿಸುವುದು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಲಸಿಕೆಯು 12ಮಾರಕ ರೋಗಗಳನ್ನು ತಡೆಗಟ್ಟಲು ಸಂಜೀವಿನಿಯಾಗಿದೆ. ಇದು ಎರಡನೆ ಸುತ್ತಿನ ಅಭಿಯಾನ ಆಗಿದ್ದು ಸೆ.11 ರಿಂದ 16ನೇ ತಾರೀಖಿನವರೆಗೆ ಇರುತ್ತದೆ ಎಂದು ಹಿರಿಯ ಆರೋಗ್ಯ ಸಹಾಯಕ ಮಹಮ್ಮದ್ ಖಾಸಿಂ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ನಾಗಪ್ಪ, ಆರೋಗ್ಯ ಇಲಾಖೆಯ ಬಿ ಟಿ ಎಂ ಪ್ರಹ್ಲಾದ್, ಹುಸೇನಪ್ಪ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಕ್ಕಳ ತಾಯಂದಿರು ಇದ್ದರು.