ಇಂದ್ರಧನುಷ್ ಕಾರ್ಯಕ್ರಮ ಯಶಸ್ವಿ ಅನುಷ್ಟಾನಕ್ಕೆ ಇತರೆ ಇಲಾಖೆಯ ಅಧಿಕಾರಿಗಳ ಪಾತ್ರ ಅತ್ಯಗತ್ಯ: ಜಿಪಂ ಸಿಇಒ ರಾಹುಲ್ ಎಸ್.ಸಂಕನೂರು


ಬಳ್ಳಾರಿ,ಜು.25: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಿಷನ್ ಇಂದ್ರಧನುಷ್ 5.0 ಅಭಿಯಾನದಲ್ಲಿ ಮಾರಕ ರೋಗಗಳಿಗೆ ಸಂಬಂಧಿಸಿದಂತೆ ಲಸಿಕೆ ನೀಡುವ ಅಭಿಯಾನವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಹೇಳಿದರು.
ಸೋಮವಾರದಂದು ನಗರದ ಜಿಲ್ಲಾ ಪಂಚಾಯತ್‍ನ ನಜೀರ್‍ಸಾಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 2023-24ನೇಯ ಸಾಲಿನ ಐಇಸಿ-ಎಸ್‍ಬಿಸಿಸಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಿಯಮಾನುಸಾರ ಕೈಗೊಳ್ಳಲು ಕ್ರಿಯಾಯೋಜನೆಗೆ ಅನುಮೊದನೆ ನೀಡಿ ಅವರು ಮಾತನಾಡಿದರು.
ಮಾರಕ ರೋಗಗಳಾದ ಗಂಟಲು ಮಾರಿ, ದಡಾರ, ಪೋಲಿಯೋ, ಡಿಫ್ತೀರಿಯಾ, ಹೆಪಟೈಟಿಸ್ ಬಿ, ಧನುರ್ವಾಯು ಹಾಗೂ ಬಾಲ ಕ್ಷಯ ರೋಗ, ದಡಾರ ರುಬೆಲ್ಲಾ, ನಿಮೊಕಾಕಲ್ ನಿಮೋನಿಯ, ರೋಟಾ ವೈರಸ್ ಮೆದಳು ಜ್ವರ ಸೇರಿದಂತೆ  ರೋಗಗಳಿಗೆ ಸಂಬಂಧಿಸಿದಂತೆ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತಿದಿನ ಹಾಗೂ ಪ್ರತಿ ಗುರುವಾರ ಗ್ರಾಮಗಳಲ್ಲಿ, ವಾರ್ಡ್‍ಗಳಲ್ಲಿ ನಿಗದಿತ ದಿನದಂದು ಹಾಕಲಾಗುವುದು. ಆದರೂ ಸಹ ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಇಂದ್ರಧನುಷ್ ಎಂದರೆ ಏಳುಬಣ್ಣಗಳ ಮಳೆಬಿಲ್ಲು. ಮಕ್ಕಳಲ್ಲಿ ಕಾಣಿಸುವ ಅಪಾಯಕಾರಿ ಏಳು  ರೋಗಗಳನ್ನು ಏಳು ಬಣ್ಣಗಳು ಪ್ರತಿನಿಧಿಸುತ್ತವೆ.  ಮಾರಕ ರೋಗಗಳು ಮಕ್ಕಳ ಸಾವಿಗೆ ಕಾರಣವಾಗುತ್ತಿದೆ. ಈ ರೋಗಗಳಿಗೆ ತುತ್ತಾಗದಂತೆ ತಡೆಯಲು ನಿಯಮಿತವಾಗಿ ಗರ್ಭಿಣಿ ಮತ್ತು ಮಕ್ಕಳಿಗೆ ಸೂಕ್ತ ಸಮಯದಲ್ಲಿ ಲಸಿಕೆ ನೀಡುವ  ಮೂಲಕ ಮಾತ್ರವೇ ಅಪಾಯವನ್ನು ತಡೆಗಟ್ಟಬಹುದು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ಅಭಿಯಾನವನ್ನು ವೇಗಗೊಳಿಸಲು ಈ ಯೋಜನೆಯನ್ನು ಪರಿಚಯಿಸಿದೆ ಎಂದರು.
ಜಿಲ್ಲೆಯಲ್ಲಿರುವ ಅಂಗನವಾಡಿ ಮತ್ತು ಶಾಲೆಗಳಲ್ಲಿ ಎಲ್ಲಾ ಮಕ್ಕಳು ನಿಗಧಿತ ಲಸಿಕೆಗಳನ್ನು ಪಡೆದಿದ್ದಾರೆ ಎಂಬುದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಸಾರ್ವಜನಿಕರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇಂದ್ರಧನುಷ್ ಯೋಜನೆ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಶಾಲಾ ಮಟ್ಟದಲ್ಲಿ ಸಾಂಕ್ರಾಮಿಕ ರೋಗಗಳು ಮತ್ತು ವೈಯಕ್ತಿಕ ಶುಚಿತ್ವ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ವಿಡಿಯೋ ಮೂಲಕ ಜನ ಜಾಗೃತಿ ಅಭಿಯಾನ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯು ರಾಜ್ಯದ ಗಡಿಭಾಗದಲ್ಲಿ ಇರುವುದರಿಂದ ಹೊಟ್ಟೆ ಪಾಡಿನ ಕೆಲಸಕ್ಕಾಗಿ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅದರಲ್ಲಿಯೂ ಕೂಲಿ ಕಾರ್ಮಿಕರು, ಕಲ್ಲು ಗಣಿಗಾರಿಕೆ ಕೆಲಸ ನಿರ್ವಹಿಸುವ ಕಾರ್ಮಿಕರು ಪ್ಯಾಕ್ಟರಿ ಮುಂತಾದ ಸ್ಥಳಗಳಿಗೆ ಕೆಲಸಕ್ಕಾಗಿ ಹೋಗುವ ಕಾರ್ಮಿಕರು ಅವರ ಮಕ್ಕಳಿಗೆ ನಿಯಮಿತವಾದ ಲಸಿಕೆಗಳನ್ನು ನೀಡಲಾಗಿದೆ ಎಂಬುದನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ವಲಸೆ ಕಾರ್ಮಿಕರ ಮಕ್ಕಳು ಈ ಅಭಿಯಾನದಿಂದ ಹೊರಗೊಳಿಯುವುದನ್ನು ತಪ್ಪಿಸಬೇಕು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ ಅವರು ಹೇಳಿದರು.
‘ಆರೋಗ್ಯ ಸಿಂಚನ’ ಜಾಗೃತಿ ಕಾರ್ಯಕ್ರಮವನ್ನು 6ನೇ ತರಗತಿಯಿಂದ 10 ನೇ ತರಗತಿ ಶಾಲಾ ಮಕ್ಕಳಿಗೆ ವಿಡೀಯೋ ಮೂಲಕ ಆರೋಗ್ಯ ಜಾಗೃತಿ ಅಭಿಯಾನವನ್ನು ಆರಂಭಿಸಲು ಸೂಚಿಸಿ, ಜಿಲ್ಲೆಯ ಒಟ್ಟು 868 ಶಾಲೆಗಳಿಗೆ 32 ತಂಡಗಳ ಮೂಲಕ ಜಾಗೃತಿ ನೀಡಲು ಕ್ರಮವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಕ್ರಿಯ ಕ್ಷಯರೋಗ ಅಭಿಯಾನದ ಪ್ರಗತಿ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನೀಲ್ ಕುಮಾರ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ, ಡಾ.ಇಂದ್ರಾಣಿ.ವಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ., ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವಿರೇಂದ್ರಕುಮಾರ, ವಿಮ್ಸ್‍ನ ಮಕ್ಕಳ ತಜ್ಞರಾದ ಡಾ.ದುರ್ಗಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರೆಹಮತ್ ಉಲ್ಲಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ, ವಿಶ್ವ ಆರೋಗ್ಯ ಸಂಸ್ಥೆ ಬಳ್ಳಾರಿ ವಲಯದ ಸರ್ವೇಕ್ಷಣಾಧಿಕಾರಿ ಡಾ.ಆರ್.ಎಸ್.ಶ್ರೀಧರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಎಲ್ಲಾ ತಾಲೂಕುಗಳ ತಾಲೂಕು ಆರೋಗ್ಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು, ಸಿಬ್ಬಂದಿಯವರು ಉಪಸ್ಥಿತರಿದ್ದರು.