ಇಂದ್ರಧನುಷ್ ಅಭಿಯಾನವವನ್ನು ಯಶಸ್ವಿಗೊಳಿಸಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ

ರಾಯಚೂರು,ಆ.೦೫- ದಡಾರ ಮತ್ತು ರುಬೆಲ್ಲಾ ನಿರ್ಮೂಲನೆಗಾಗಿ ೫ ವರ್ಷದೊಳಗಿನ ಮತ್ತು ಗರ್ಭಿಣಿ ಮಹಿಳೆಯರಿಗೆ ನೀಡಲಾಗುವ ಇಂದ್ರಧನುಷ್ ೫.೦ ಲಸಿಕೆಯ ಅಭಿಯಾನವನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಲು ಎಲ್ಲಾ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಆ.೦೪ರಂದು(ಶುಕ್ರವಾರ) ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದ್ರಧನುಷ್ ೫.೦ ತೀವ್ರಗೊಳಿಸುವಿಕೆ ಮತ್ತು ದಡಾರ, ರುಬೆಲ್ಲಾ ನಿರ್ಮೂಲನೆಗಾಗಿ ಹಮ್ಮಿಕೊಂಡಿದ್ದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರ, ಉಪಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಇಂದ್ರಧನುಷ್ ಲಸಿಕೆಯನ್ನು ನಿಡಲಾಗುತ್ತದೆ. ಸಾರ್ವಜನಿಕರು ತಮ್ಮ ಮನೆಯಲ್ಲಿರುವ ೫ ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರಿಗೆ ಲಸಿಕೆಯನ್ನು ಕೊಡಿಸುವ ಮೂಲಕ ದಡಾರ ಮತ್ತು ರುಬೆಲ್ಲಾ ರೋಗದಿಂದ ದೂರವಿಡಬಹುದಾಗಿದೆ ಎಂದರು.
ಆ.೭ರಿಂದ ಆ.೧೨ರವರೆಗೆ ಇಂದ್ರಧನುಷ್ ೫.೦ ಅಭಿಯಾನದ ಮೊದಲನೆ ಹಂತದ ಲಸಿಕಾಕರಣವನ್ನು ಹಮ್ಮಿಕೊಳ್ಳಲಾಗಿದ್ದು, ಎರಡನೇ ಹಂತವಾಗಿ ಸೆ.೧೧ರಿಂದ ೧೬ ವರೆಗೆ ನಡೆಸಲಾಗುತ್ತದೆ. ಮೂರನೇ ಹಂತವಾಗಿ ಅ.೯ರಿಂದ ೧೪ ರವರೆಗ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಆ.೦೭ರಂದು ನಡೆಯುವ ಇಂದ್ರಧನುಷ್ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಲು ಪ್ರತಿಯೊಬ್ಬ ಅಧಿಕಾರಿಯು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಮತ್ತು ಲಸಿಕೆಯಿಂದ ತಪ್ಪಿದ ಮಕ್ಕಳು ಮತ್ತು ಗರ್ಭಿಣೀಯರನ್ನು ಲಸಿಕಾಕರಣಕ್ಕೆ ಕರೆತಂದು ಲಸಿಕೆಯನ್ನು ಹಾಕಿಸಲು ಶ್ರಮಿಸಬೇಕು ಎಂದು ಸೂಚಿಸಿದರು.
ಇಮದ್ರಧನುಷ್ ಅಭಿಯಾನದಡಿ ಲಸಿಕೆಯನ್ನು ಪಡೆಯುವವರು ಉಚಿತವಾಗಿ ಆಶಾ ಖಾರ್ಯಕರ್ತರಿಂದ ಯು-ವಿನ್ ನಲ್ಲಿ ಮುಂಚಿತವಾಗಿ ನೊಂದಾಯಿಸಿಕೊಳ್ಳಬಹುದು ಮತ್ತು ನೊಮದಾಯಿಸಿ ಲಸಿಕೆ ಪಡೆದ ಪ್ರತಿಯೊಬ್ಬರಿಗೂ ಲಸಿಕಾಕರಣದ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದರು.
ಇಂದ್ರಧನುಷ್ ಅಭಿಯಾನದ ಪೋಸ್ಟರ್ ಬಿಡುಗಡೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪರಿಣಾಮಕಾರಿ ಇಂದ್ರಧನುಷ್ ೫.೦ ಅಭಿಯಾನದ ಪೋಸ್ಟರ್ ಅನ್ನು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾ ಆರ್.ಸಿಎಚ್ ಅಧಿಕಾರಿ ಡಾ.ನಂದಿತಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಚೇತನ್‌ಕುಮಾರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಪಾಟೀಲ್, ತಾಲೂಕು ಆರೋಗ್ಯ ಆಧಿಕಾರಿ ಡಾ.ಶಾಕೀರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಶಂಕರ, ವೈದ್ಯರಾದ ಡಾ.ಅಜಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.