ಇಂದು ವಿಶ್ವ ಜಲದಿನ ನಮ್ಮ ಜಲಮೂಲಗಳು ಉಳಿಯಲಿ

ವಿಜಯೇಂದ್ರ ಕುಲಕರ್ಣಿ
ಕಲಬುರಗಿ: ಇತ್ತೀಚಿಗೆ ಕಲಬುರಗಿಗೆ ಬಂದಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ಜಿಲ್ಲೆಯ ಪುರಾತನ ಕಲ್ಯಾಣಿ ( ಪುಷ್ಕರಣಿ)ಗಳ ಜೀರ್ಣೋದ್ಧಾರ ಕೈಗೊಳ್ಳುವ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು.ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ನಮ್ಮಲ್ಲಿರುವ ಅನೇಕ ಪ್ರಾಚೀನ ಭಾವಿಗಳಿಗೆ ಮರುಜೀವ ಬಂದೀತು.
ಕಲಬುರಗಿ ಜಿಲ್ಲೆಯಾದ್ಯಂತ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಹಳೆಯ ಬಾವಿಗಳಿವೆ.ಹಳ್ಳಿಗಳಲ್ಲೂ ಸಹ ನಲ್ಲಿ, ಕೊಳವೆ ಬಾವಿಗಳ ಬಳಕೆ ಹೆಚ್ಚಾದಂತೆ ಇಂತಹ ಹಳೆಯ ಬಾವಿಗಳು ಹಾಳು ಬೀಳುತ್ತಿವೆ.
ಹಿಂದಿನ ರಾಜ ಮಹಾರಾಜರು ಅನೇಕ ಬಾವಿ,ಪುಷ್ಕರಣಿ, ಕೊಳ,ಹೊಕ್ಕರಣೆ ಮೊದಲಾದುವನ್ನು ಕಟ್ಟಿಸಿ ಜನಾನುರಾಗಿಗಳಾಗಿದ್ದರು.ಕೆರೆಕಟ್ಟೆ ಬಾವಿಗಳ ನಿರ್ಮಾಣ ಪುಣ್ಯದ ಕೆಲಸ ಎಂದು ಭಾವಿಸಿದ್ದರು. ಅನೇಕ ಶಾಸನಗಳಲ್ಲಿ ಕೆರೆ ಬಾವಿಗಳ ನಿರ್ಮಾಣದ ಉಲ್ಲೇಖಗಳಿವೆ.
ಅನೇಕ ಕಲಾತ್ಮಕ ಬಾವಿಗಳು ಕಲಬುರಗಿ ಜಿಲ್ಲೆಯಲ್ಲಿವೆ.ಉದಾಹರಣೆಗೆ ಕಲಬುರಗಿ ಹೀರಾಪುರದ ಬಾವಿಗಳು,ಯಡ್ರಾಮಿಯ ರಾಮತೀರ್ಥ, ಪೇಟೆಶಿರೂರದ ಬಾವಿ, ಕಾಳಗಿ , ಕುಳಗೇರಿ,ನಾಗಾವಿ, ಮೋಘಾ ಊರಿನ ಪುರಾತನ ದೇವಾಲಯಗಳ ಬಳಿಯ ಪುಷ್ಕರಣಿಗಳನ್ನು ಹೆಸರಿಸಬಹುದು.
ಕೆಲವು ಬಾವಿಗಳು ಇಂದಿಗೂ ಬಳಕೆಯಲ್ಲಿವೆ. ಬಹುತೇಕ ಕಡೆ ಹೂಳು ತುಂಬಿಕೊಂಡು ಉಪಯೋಗಕ್ಕೆ ಬಾರದಂತಾಗಿವೆ.ಯುವಬ್ರಿಗೇಡ್ ಸ್ವಯಂಸೇವಾ ಸಂಸ್ಥೆ ಮತ್ತು ಸ್ಥಳೀಯ ಯುವಕರು ಇತ್ತೀಚಿಗೆ ವಾಡಿ ಬಳಿಯ ರಾವೂರ ಗ್ರಾಮದಲ್ಲಿ ಕಸ ತುಂಬಿ ನಿರುಪಯುಕ್ತವಾಗಿದ್ದ ಪುರಾತನ ಬಾವಿಯ ಹೂಳು ತೆಗೆದು ಸ್ವಚ್ಛಗೊಳಿಸಿದ್ದನ್ನು ಇಲ್ಲಿ ನೆನೆಯ ಬಹುದು.
ಇಂಥ ಬಳಕೆಯಲ್ಲಿಲ್ಲದ ಪುರಾತನ ಬಾವಿಗಳ ಸರ್ವೇ ನಡೆಸಿ, ಅವುಗಳಿಗೆ ಮರುಜೀವ ತುಂಬುವ ಕೆಲಸವಾಗಬೇಕಿದೆ. ನಮ್ಮ ಸಾಂಪ್ರದಾಯಿಕ ಜಲಮೂಲಗಳನ್ನು ಉಳಿಸಬೇಕಾದ್ದು ಇಂದು ಅ ಗತ್ಯವಾಗಿದೆ.