ಇಂದು ವಿಶ್ವ ಆನೆ ದಿನ

ವಿಶ್ವ ಆನೆ ದಿನವನ್ನು ಆಗಸ್ಟ್ ೧೨ ರಂದು ಆಚರಿಸಲಾಗುತ್ತದೆ, ಇದು ಅಂತರರಾಷ್ಟ್ರೀಯ ವಾರ್ಷಿಕ ಕಾರ್ಯಕ್ರಮವಾಗಿದೆ, ಇದು ವಿಶ್ವದ ಆನೆಗಳ ಸಂರಕ್ಷಣೆ ಮತ್ತು ರಕ್ಷಣೆಗೆ ಸಮರ್ಪಿಸಲಾಗಿದೆ. ೨೦೧೧ರಲ್ಲಿ ಈ ಆನೆಗಳ ದಿನವನ್ನು ಎಲಿಫೆಂಟ್ ರೀಇಂಟ್ರಡಕ್ಷನ್ ಫೌಂಡೇಶನ್ ಮತ್ತು ಚಲನಚಿತ್ರ ನಿರ್ಮಾಪಕರಾದ ಪೆಟ್ರೀಷಿಯಾ ಸಿಮ್ಸ್ ಮತ್ತು ಮೈಕೆಲ್ ಕ್ಲಾರ್ಕ್ ಅವರು ಪ್ರಾರಂಭಿಸಿದರು. ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆನೆಗಳ ದಿನವನ್ನು ೨೦೧೨ರ ಆಗಸ್ಟ್ ೧೨ರಂದು ಆಚರಿಸಲಾಯಿತು. ಅಲ್ಲಿಂದ ಪ್ರತಿ ವರ್ಷವೂ ಗಜರಾಜನಿಗಾಗಿ ಒಂದು ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ೨೦೧೨ ರಲ್ಲಿ, ಪೆಟ್ರೀಷಿಯಾ ಸಿಮ್ಸ್ ವಿಶ್ವ ಎಲಿಫೆಂಟ್ ಸೊಸೈಟಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಆನೆಗಳಿಂದ ಎದುರಾಗುವ ಅಪಾಯಗಳು ಮತ್ತು ಜಾಗತಿಕವಾಗಿ ಅವುಗಳನ್ನು ರಕ್ಷಿಸುವ ಅನಿವಾರ್ಯತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಕಳೆದ ೭೫ ವರ್ಷಗಳಲ್ಲಿ ಆನೆಗಳ ಸಂಖ್ಯೆ ೫೦% ರಷ್ಟು ಕಡಿಮೆಯಾಗಿದೆ . ಪ್ರಸ್ತುತ ಆನೆಸಂಖ್ಯೆಯ ಅಂದಾಜಿನ ಪ್ರಕಾರ ಪ್ರಪಂಚದಲ್ಲಿ ಸುಮಾರು ೫೦,೦೦೦ -೬೦೦೦೦ ಏಷ್ಯನ್ ಆನೆಗಳಿವೆ. ೬೦% ಕ್ಕಿಂತ ಹೆಚ್ಚು ಆನೆಗಳು ಭಾರತದಲ್ಲಿದೆ. ಭಾರತದಲ್ಲಿ ಸುಮಾರು ೨೭,೩೧೨ ಏಷ್ಯನ್ ಆನೆಗಳಿವೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ತಿಳಿಸಿದೆ. ದೇಶದಲ್ಲಿರುವ ಆನೆಗಳ ಪೈಕಿ ನಮ್ಮ ಕರ್ನಾಟಕದಲ್ಲೇ ಅತಿ ಹೆಚ್ಚು ಆನೆಗಳಿವೆ. ರಾಜ್ಯದಲ್ಲಿ ಸುಮಾರು ೬,೦೪೯ ಗಜಗಳಿವೆ. ವಿಶೇಷಷವೆಂದರೆ ಕರ್ನಾಟಕದಲ್ಲಿ ಜಂಬೋಗಳಿಗೆ ವಿಶೇಷ ಗೌರವವಿದೆ. ಹೀಗಾಗಿ ನಾಡಹಬ್ಬ ಮೈಸೂರು ದಸರಾ ಮೆರವಣಿಗೆಯನ್ನು ಕೂಡಾ ಆನೆಗಳು ಮುನ್ನಡೆಸುತ್ತದೆ. ಕರ್ನಾಟಕದ ನಂತರ ಹೆಚ್ಚಿನ ಆನೆಗಳಿರುವ ರಾಜ್ಯಗಳಲ್ಲಿ ಅಸ್ಸಾಂ ಎರಡನೇ ಸ್ಥಾನದಲ್ಲಿದೆ. ಇಲ್ಲಿ ೫,೭೧೯ ಆನೆಗಳಿದ್ದರೆ, ಮೂರನೇ ಸ್ಥಾನದಲ್ಲಿರುವ ಕೇರಳದಲ್ಲಿ ೩,೦೫೪ ಆನೆಗಳಿವೆ. ವಿಶ್ವ ಆನೆ ದಿನದ ಮುಖ್ಯ ಉದ್ದೇಶವೆಂದರೆ, ಸೆರೆಹಿಡಿದಿರುವ ಆನೆಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವುದು, ಅವುಗಳ ಅಕ್ರಮ ಬೇಟೆ ಮತ್ತು ದಂತದ ವ್ಯಾಪಾರದ ವಿರುದ್ಧ ಜನರಿಗೆ ಅರಿವು ಮೂಡಿಸುವುದಾಗಿದೆ. ಆನೆ ಭೂಮಿ ಮೇಲಿನ ದೊಡ್ಡ ಪ್ರಾಣಿ, ಸೂಕ್ಷ ಸಂವೇದನಾಶೀಲ, ಅಗಾಧ ನೆನಪಿನ ಶಕ್ತಿ ಇರುವ ಆನೆ ಮಾನವರಂತೆ ಸಂಘಜೀವಿ, ಮಾತೃ ಪ್ರಧಾನ ವ್ಯವಸ್ಥೆ ಹೊಂದಿದ ಗೆಳೆತನ ಬಿಂಬಿಸುವ ಭೂಮಿ ಮೇಲಿನ ದೊಡ್ಡ ಸಸ್ತನಿ. ಆನೆಗಳ ಹಿಂಡು ಹಾಗೂ ಆನೆಗಳು ಹಾಕುವ ಲದ್ದಿ ಆಧಾರದ ಮೇಲೆ, ಕೆರೆಗಳ ಸಮೀಪ ನೀರು ಕುಡಿಯುವಾಗ ಕಾಣುವ ಆನೆಗಳ ಸಂಖ್ಯೆಯನ್ನು ಅಂದಾಜಿಸಲಾಗುತ್ತದೆ. ಪ್ರತಿ ೪ ವರ್ಷಗಳಿಗೊಮ್ಮೆ ಆನೆಗಳ ಗಣತಿ ಕಾರ್ಯ ನಡೆಯುತ್ತದೆ.ಆನೆ ಗಂಟೆಗೆ ೪೦ ಕಿ.ಮೀ. ವೇಗದಲ್ಲಿ ಓಡಬಲ್ಲದು. ಮತ್ತೊಂದು ಆನೆಯ ಘೀಳಿನ ಶಬ್ದವನ್ನು ಇನ್ನೊಂದು ಆನೆ ೧೦ ಕಿ.ಮೀ. ದೂರದಲ್ಲಿದ್ದರೂ ಗ್ರಹಿಸಬಲ್ಲದು. ಆನೆ ಬಗೆಗೆ ಪುರಾಣಗಳಲ್ಲೂ ಉಲ್ಲೇಖವಿದೆ .ಗಜಮುಖನಾಗಿರುವ ಗಣಪತಿ ಹಿಂದೂ ಧರ್ಮದ ಆರಾಧ್ಯ ದೈವ. ಯುದ್ಧಗಳಿಗೆ ಬಳಕೆ, ಭಾರದ ವಸ್ತುಗಳ ರವಾನೆಗೂ ಆನೆಯ ಸಹಾಯ, ದೇಗುಲ ಆನೆ ಅವಶ್ಯ ಬೇಕು. ಆನೆಗಳ ಸಹಜ ಜೀವನ ನಡೆಸಲು ಮನುಷ್ಯರು ಅನುವು ಮಾಡಿಕೊಡಬೇಕು. ಆ ಪ್ರಾಣಿಗಳಿಗೆ ಅಗತ್ಯವಿರುವ ಪ್ರದೇಶ ಸುರಕ್ಷತೆಯನ್ನು ಒದಗಿಸಿಕೊಡಬೇಕು. ಅವುಗಳನ್ನು ಬೇಟೆಯಾಡುವುದನ್ನು ನಿಲ್ಲಿಸಬೇಕು ಎಂಬುವುದನ್ನು ಸಾರುವುದೇ ಈ ವಿಶ್ವ ಆನೆಗಳ ದಿನದ ಪ್ರಮುಖ ಉದ್ದೇಶವಾಗಿದೆ. ದಂತ ಮತ್ತು ಇತರ ಕಾರಣಕ್ಕಾಗಿ ಆನೆಗಳ ಬೇಟೆಯನ್ನು ನಿಲ್ಲಿಸಬೇಕು. ಕಾಡಾನೆಗಳ ಆವಾಸಗಳನ್ನು ರಕ್ಷಿಸಬೇಕಿದೆ. ಅಲ್ಲಿ ಮನುಷ್ಯ ಹಸ್ತಕ್ಷೇಪ ಮಾಡಬಾರದು. ಮಾನವ ಮತ್ತು ಆನೆ ಸಂಘರ್ಷ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಆಗಾಗ್ಗೆ ಅಕ್ರಮ ವಿದ್ಯುತ್ ಸಂಪರ್ಕದಿಂದ ದೈತ್ಯ ಜೀವಿಗಳು ಬಲಿಯಾಗುತ್ತಿದೆ. ಕಳೆದ ೮ ವರ್ಷಗಳಲ್ಲಿ ಆನೆಗಳ ಮೀಸಲು ಪ್ರದೇಶಗಳ ಸಂಖ್ಯೆ ಹೆಚ್ಚಾಗಿರುವುದು ಸಂತಸ ವಿಷಯವಾಗಿದೆ.