ಇಂದು ವಿಕ್ಕಿ ಕೌಶಲ್ – ಕತ್ರಿನಾ ಕೈಫ್ ವಿವಾಹ

ಜೈಪುರ, ಡಿ ೯- ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿ ಇಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹವಾಗುತ್ತಿದ್ದು, ಮದುವೆ ಕುರಿತಾದ ಯಾವುದೇ ಮಾಹಿತಿ ಸೋರಿಕೆ ಆಗದಂತೆ ಭಾರಿ ಎಚ್ಚರಿಕೆ ವಹಿಸಲಾಗಿದೆ.

ಹಿಂದಿ ಚಿತ್ರರಂಗದ ಸೆಲೆಬ್ರಿಟಿ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಇಂದು ಅದ್ಧೂರಿಯಾಗಿ ಹಿಂದೂ ಸಂಪ್ರದಾಯದ ಪ್ರಕಾರ ಕುಟುಂಬಸ್ಥರು, ಸ್ನೇಹಿತರು ಹಾಗೂ ಬಂಧುಗಳ ಸಮ್ಮುಖದಲ್ಲಿ ಹಸೆಮಣೆ ಏರುತ್ತಿದ್ದಾರೆ.

ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಅದ್ಧೂರಿ ವಿವಾಹ ಕಾರ್ಯಕ್ರಮ ಇಂದು ನಡೆಯುತ್ತಿದೆ. ಡಿ. ೬ರಂದು ಮುಂಬೈನಿಂದ ತಮ್ಮ ಮದುವೆ ಸ್ಥಳ ತಲುಪಿದ ತಾರಾ ಜೋಡಿ, ಡಿ.೭ ರಂದು ಮೆಹಂದಿ ಮತ್ತು ನಿನ್ನೆ ಅರಶಿಣ ಶಾಸ್ತ್ರದಲ್ಲಿ ಸಖತ್ ಎಂಜಾಯ್ ಮಾಡಿದ್ದರು.ಜಗಮಗಿಸುವ ಗಾಜಿನ ಮಂಟಪದಲ್ಲಿ ತಾರೆಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿಶೇಷ ಅಂದ್ರೆ, ಮದುಮಗ ವಿಕ್ಕಿ ಕೌಶಲ್ ಅವರು ೭ ಬಿಳಿ ಕುದುರೆಗಳ ಜತೆಯಲ್ಲಿ ಈ ಮಂಟಪಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರೆ. ಮದುವೆ ನಡೆಯುವ ಹೋಟೆಲ್ ಸುತ್ತಮುತ್ತ ಯಾವುದೇ ಡ್ರೋನ್ಗಳು ಹಾರಾಟ ನಡೆಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.

ಜೊತೆಗೆ, ಮದುವೆಗೆ ಆಗಮಿಸುತ್ತಿರುವ ಅತಿಥಿಗಳಿಗೆ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಆರ್ಟಿ-ಪಿಸಿಆರ್ ವರದಿ ತೆಗೆದುಕೊಂಡು ಬರುವಂತೆ ಈ ಹಿಂದೆಯೇ ಸೂಚನೆ ನೀಡಲಾಗಿದೆ.ಮದುವೆ ಕುರಿತಾದ ಯಾವುದೇ ಮಾಹಿತಿ ಸೋರಿಕೆ ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಕತ್ರಿನಾ ಕೈಫ್ ಮೂಲತಃ ಬ್ರಿಟನ್ನವರಾಗಿದ್ದು, ಜೀವನ ಕಟ್ಟಿಕೊಂಡಿದ್ದು ಮಾತ್ರ ಇಂಡಿಯಾದಲ್ಲಿ. ಮದುವೆಗೆ ಅವರ ಕುಟುಂಬದ ಸದಸ್ಯರೆಲ್ಲ ಬ್ರಿಟನ್ನಿಂದ ಆಗಮಿಸಿದ್ದಾರೆ. ಕತ್ರಿನಾ ಸಹೋದರಿ ಇಸಾಬೆಲ್ ಕೈಫ್, ಸಹೋದರ ಸೆಬಾಸ್ಟಿಯನ್ ಮೈಕೆಲ್ ಕೂಡ ಬಂದಿದ್ದಾರೆ.

ವಿವಾಹ ಮಹೋತ್ಸವಕ್ಕೆ ಕಬೀರ್ ಖಾನ್, ಮಿನಿ ಮಾಥುರ್, ಅಂಗದ್, ನೇಹಾ ಧೂಪಿಯಾ, ಶರ್ವರಿ ವಾಘ್, ಗಾಯಕ ಗುರುದಾಸ್ ಮಾನ್, ಸಿಮ್ರಾನ್ ಕೌರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಹಾಜರಿದ್ದು, ನಟ ಸಲ್ಮಾನ್ ಖಾನ್ ಬರುವುದಿಲ್ಲ ಎಂಬುದು ಖಚಿತವಾಗಿದೆ.