ಇಂದು ರಾಷ್ಟ್ರೀಯ ಯುವ ದಿನ


ಜನವರಿ 12 ಸ್ವಾಮೀ ವಿವೇಕಾನಂದರು ಜನ್ಮ ತಾಳಿದ ದಿನವಾಗಿರುವುದರಿಂದ 1984ರಿಂದ ಇದನ್ನು ನಿರಂತರವಾಗಿ ‘ರಾಷ್ಟ್ರೀಯ ಯುವ ದಿನ’ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ. ಸ್ವಾಮೀ ವಿವೇಕಾನಂದರು ಹಿಂದೂ ಧರ್ಮವನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಲು ಮಹತ್ತರವಾದ ಕೊಡುಗೆಯನ್ನು ನೀಡಿದರು. ಅದರಲ್ಲೂ ವೇದಾಂತ ಮತ್ತು ಯೋಗ ಪರಂಪರೆಯನ್ನು ಪ್ರಸಿದ್ದಗೊಳಿಸಿದ ಅವರು ಹಿಂದೂ ಧರ್ಮವನ್ನು ಆಧುನಿಕರಣಗೊಳಿಸಲು ಶ್ರಮಿಸಿದರು.

ಬ್ರಿಟಿಷರ ವಸಾಹತುಶಾಹಿ ಭಾರತದಲ್ಲಿ ರಾಷ್ಟ್ರೀಯತೆಯ ತತ್ವವನ್ನು ಪ್ರಸರಿಸುವುದರ ಮೂಲಕ ವಿಕೇಂದ್ರೀಕೃತವಾಗಿದ್ದ ಹಿಂದೂ ಧರ್ಮಕ್ಕೆ ಐಕ್ಯತೆಯನ್ನು ತಂದರು. ವಿವೇಕಾನಂದರು ರಾಮಕೃಷ್ಣ ಮಠವನ್ನು ಸ್ಥಾಪಿಸುವುದರ ಮೂಲಕ  ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 1893 ರಲ್ಲಿ ಚಿಕ್ಯಾಗೋ ದಲ್ಲಿ ನಡೆದ ಜಾಗತಿಕ ಧಾರ್ಮಿಕ ಸಂಸತ್ತಿನಲ್ಲಿ  ‘ಅಮೆರಿಕಾದ ಸಹೋದರ ಸಹೋದರಿಯರೇ’ ಎಂದು ನೀಡಿದ ಭಾಷಣ ಇಂದಿಗೂ ಕೂಡ ಪ್ರಸಿದ್ದಿಯಾಗಿದೆ.

ಸ್ವಾಮೀ ವಿವೇಕಾನಂದರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ವಿವೇಕಾನಂದರ ಜನ್ಮ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸುವ ಮೂಲಕ ಅವರ ಚಿಂತನೆಗಳನ್ನು ಪ್ರಸ್ತುತವಾಗಿರಿಸಲಾಗಿದೆ. 2013 ಜನವರಿ 13 ರಂದು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರವರು ವಿವೇಕಾನಂದರ 150 ಜನ್ಮದಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಾತನಾಡುತ್ತಾ ವಿವೇಕಾನಂದರ ಚಿಂತನೆಗಳನ್ನು ಶ್ಲಾಘಿಸಿ ಅವುಗಳನ್ನು  ಮುಂದಿನ ಯುವ ಪೀಳಿಗೆಗೆ ತಲುಪಿಸಬೇಕಾಗಿದೆ ಎಂದರು.

ಸ್ವಾಮಿ ವಿವೇಕಾನಂದರು 1863 ರ ಜನವರಿ 12 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಸ್ವಾಮಿ ವಿವೇಕಾನಂದರ ನಿಜವಾದ ಹೆಸರು ನರೇಂದ್ರನಾಥ ದತ್. ಅವರು ವೇದಾಂತದ ಪ್ರಸಿದ್ಧ ಮತ್ತು ಪ್ರಭಾವಶಾಲಿ ಆಧ್ಯಾತ್ಮಿಕ ಗುರುಗಳಾಗಿದ್ದರು. ಚಿಕ್ಕಂದಿನಿಂದಲೇ ಆಧ್ಯಾತ್ಮದತ್ತ ಒಲವು ಅವರಿಗೆ ಮೂಡಿತು. ಅಧ್ಯಯನದಲ್ಲಿ ಅಪಾರ ಆಸಕ್ತಿ ಜ್ಞಾನ ಹೊಂದಿದ್ದರು. 25ನೇ ವಯಸ್ಸಿಗೆ ಬಂದಾಗ ನರೇಂದ್ರನಾಥರು ತಮ್ಮ ಗುರುಗಳಿಂದ ಪ್ರಭಾವಿತರಾಗಿ ಲೌಕಿಕ ಬಾಂಧವ್ಯವನ್ನು ತೊರೆದು ಸನ್ಯಾಸಿಯಾದರು. ಸನ್ಯಾಸಿಯಾದ ನಂತರ ಅವರಿಗೆ ವಿವೇಕಾನಂದ ಎಂದು ಹೆಸರಿಸಲಾಯಿತು. 1881 ರಲ್ಲಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಭೇಟಿಯಾದರು.

ಸ್ವಾಮಿ ವಿವೇಕಾನಂದರನ್ನು ಆಲ್ ರೌಂಡರ್ ಎಂದು ಕರೆಯಲಾಗುತ್ತದೆ. ಅವರು ಧರ್ಮ, ತತ್ವಶಾಸ್ತ್ರ, ಇತಿಹಾಸ, ಕಲೆ, ಸಮಾಜ ವಿಜ್ಞಾನ, ಸಾಹಿತ್ಯ ಬಲ್ಲವರಾಗಿದ್ದರು. ಶಿಕ್ಷಣದಲ್ಲಿ ಉತ್ತಮವಾದುದಲ್ಲದೆ ಭಾರತೀಯ ಶಾಸ್ತ್ರೀಯ ಸಂಗೀತದ ಜ್ಞಾನವನ್ನೂ ಹೊಂದಿದ್ದರು. ಇದಲ್ಲದೆ, ವಿವೇಕಾನಂದ ಅವರು ಉತ್ತಮ ಆಟಗಾರರು ಸಹ ಆಗಿದ್ದರು. ಅವರು ಯುವಕರಿಗೆ ಸ್ಫೂರ್ತಿಯಾಗುವುದರಲ್ಲಿ ಯಾವುದರಲ್ಲೂ ಕಡಿಮೆಯಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ಅವರು ತಮ್ಮ ಅಮೂಲ್ಯವಾದ ಆಲೋಚನೆಗಳು ಮತ್ತು ಸ್ಪೂರ್ತಿದಾಯಕ ಮಾತುಗಳೊಂದಿಗೆ ಮುಂದುವರಿಯಲು ಯುವಕರನ್ನು ಪ್ರೋತ್ಸಾಹಿಸುತ್ತಿದ್ದರು. ಅದಕ್ಕಾಗಿಯೇ ಸ್ವಾಮಿ ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ಸ್ವಾಮಿ ವಿವೇಕಾನಂದರು ಆಗಾಗ ಜನರಿಗೆ ಪ್ರಶ್ನೆ ಕೇಳುತ್ತಿದ್ದರು, ನೀವು ದೇವರನ್ನು ನೋಡಿದ್ದೀರಾ? ಇದಕ್ಕೆ ಸರಿಯಾದ ಉತ್ತರ ಯಾರಿಂದಲೂ ಸಿಕ್ಕಿಲ್ಲ. ಒಮ್ಮೆ ಅವರು ರಾಮಕೃಷ್ಣ ಪರಮಹಂಸರಿಗೆ ಅದೇ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ರಾಮಕೃಷ್ಣ ಪರಮಹಂಸರು ಉತ್ತರಿಸಿದರು. ಹೌದು, ನಾನು ದೇವರನ್ನು ನಿಮ್ಮಂತೆಯೇ ಸ್ಪಷ್ಟವಾಗಿ ನೋಡುತ್ತೇನೆ. ಆದರೆ ನಾನು ಅವನನ್ನು ನಿಮಗಿಂತ ಹೆಚ್ಚು ಆಳವಾಗಿ ಅನುಭವಿಸಲು ಸಮರ್ಥನಾಗಿದ್ದೇನೆ ಎಂದಿದ್ದರು. ಸ್ವಾಮಿ ವಿವೇಕಾನಂದರು 1897 ರಲ್ಲಿ ಕೋಲ್ಕತ್ತಾದಲ್ಲಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು.