ಇಂದು ರಾತ್ರಿಯಿಂದ ೧೪ ದಿನ ಲಾಕ್ ಡೌನ್ : ದಿನಸು ಖರೀದಿಗೆ ಮುಗಿಬಿದ್ದ ಜನ

 • ಸಾಮಾಜಿಕ ಅಂತರ ಮಾಯೆ : ರಸ್ತೆಗಳಲ್ಲಿ ಟ್ರಾಫಿಕ್ ಜಾಮ್…
  ರಾಯಚೂರು.ಏ.೨೭- ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಇಂದು ರಾತ್ರಿ ೯ ಗಂಟೆಯಿಂದ ಮುಂದಿನ ೧೪ ದಿನಗಳ ಕಾಲ ಕರ್ನಾಟಕ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಂದು ಮಾರುಕಟ್ಟೆಯಲ್ಲಿ ದಿನ ನಿತ್ಯಕ್ಕಿಂತ ಅಧಿಕವಾಗಿ ಜನರ ಓಡಾಟ ಕಂಡು ಬಂದಿತು.
  ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದಿನ ೧೪ ದಿನಗಳಿಗೆ ಬೇಕಾದ ದಿನಸುಗಳನ್ನು ಇನ್ನಿತರ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮಾರುಕಟ್ಟೆಗೆ ಮುಗಿಬಿದಿದ್ದರು. ಪ್ರತಿನಿತ್ಯ ಮುಂಜಾನೆ ೬ ಗಂಟೆಯಿಂದ ೧೦ ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರೂ ಜನರ ಕಳೆದ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ಎದುರಿಸಿದ ಸಮಸ್ಯೆಗಳ ಅನುಭವವನ್ನಾಧರಿಸಿ, ಇಂದು ಭಾರೀ ಸಂಖ್ಯೆಯಲ್ಲಿ ಜನರು ಮಾರುಕಟ್ಟೆಗೆ ಆಗಮಿಸಿದ್ದರು.
  ಮುಂಜಾನೆಯಿಂದಲೇ ಈ ಓಡಾಟ ತೀವ್ರವಾಗಿತ್ತು. ಸಾಮಾನ್ಯವಾಗಿ ಸೋಮವಾರ ಮಾರುಕಟ್ಟೆಯಲ್ಲಿ ಜನರ ಓಡಾಟ ವ್ಯಾಪಕವಾಗಿರುತ್ತದೆ. ಆದರೆ, ಇಂದು ಅದಕ್ಕಿಂತಲೂ ಅಧಿಕ ಪ್ರಮಾಣದ ಜನ ಕುಟುಂಬಗಳು ಸಮೇತ ಮುಖ್ಯ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ತೊಡಗಿದ್ದರು. ಮೇ.೧೨ ರವರೆಗೆ ಲಾಕ್ ಡೌನ್ ಮುಂದುವರೆಯುವ ಹಿನ್ನೆಲೆಯಲ್ಲಿ ಜನ ಅಲ್ಲಿವರೆಗೆ ಅಗತ್ಯವಾದ ಸಾಮಾನು ಸರಂಜಾಮುಗಳನ್ನು ಸಂಗ್ರಹಿಸಿಕೊಳ್ಳಲು ತರಾತುರಿಯಲ್ಲಿ ತೊಡಗಿದ್ದರು. ಕಳೆದ ವರ್ಷ ಮಾರ್ಚ್ ೨೪ ರಿಂದ ಮೇ.೧೬ ರವರೆಗೆ ಲಾಕ್ ಡೌನ್ ವಿಧಿಸಲಾಗಿತ್ತು.
  ಸುಮಾರು ೫೦ ದಿನಗಳ ಈ ಲಾಕ್ ಡೌನ್ ವೇಳೆಯಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳನ್ನು ಜನರು ಎದುರಿಸಬೇಕಾಯಿತು. ಈಗ ಅಂತಹ ಸಂದರ್ಭಗಳು ಎದರಿಸದಂತೆ ಪೂರ್ವ ಸಿದ್ಧತೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಕಾರಣ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಣೆಯಾಗಿತ್ತು. ಬಹುತೇಕರು ಮಾಸ್ಕ್ ಧರಿಸಿದ್ದರಾದರೂ, ಸಾಮಾಜಿಕ ಅಂತರದ ಕೊರತೆ ಕೊರೊನಾ ಹರಡುವಿಕೆಗೆ ಪೂರಕವಾಗಿತ್ತು. ಇಂದು ರಾತ್ರಿಯಿಂದ ವಿಮಾನ ಮತ್ತು ರೈಲು ಸಂಚಾರ ಹೊರತು ಪಡಿಸಿದರೇ, ಉಳಿದಂತೆ ಎಲ್ಲಾ ಸಾರಿಗೆ ಸಂಚಾರ ವ್ಯವಸ್ಥೆಯನ್ನು ತಡೆಯಲಾಗುತ್ತದೆ.
  ಶಾಲಾ, ಕಾಲೇಜು ಮತ್ತು ಕೋಚಿಂಗ್ ತರಬೇತಿ ಕೇಂದ್ರಗಳು ಬಂದ್ ಮಾಡಲು ಆದೇಶಿಸಲಾಗಿದೆ. ಹೋಟೆಲ್‌ಗಳಿಂದ ಪಾರ್ಸೆಲ್ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಚಿತ್ರಮಂದಿರ, ಜಿಮ್, ಕ್ರೀಡೆ, ಈಜು ಸೇರಿದಂತೆ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಸಾಮಾಜಿಕ, ರಾಜಕೀಯ, ಕ್ರೀಡೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಗಿತಗೊಳಿಸಲಾಗಿದೆ. ಎಲ್ಲಾ ಪ್ರಾರ್ಥನಾ ಮತ್ತು ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ತರಕಾರಿ, ಹಾಲು, ಮಾಂಸ, ವೈದ್ಯಕೀಯ ಸೇವೆ, ಮೆಡಿಕಲ್ ಶಾಪ್ ಸೌಲಭ್ಯ ದೊರೆಯಲಿದೆ.
  ಅಗತ್ಯ ಜೀವನಾವಶ್ಯಕ ಕೇಂದ್ರಗಳನ್ನು ಬಿಟ್ಟರೇ ಬೇರೆ ಎಲ್ಲವೂ ನಾಳೆಯಿಂದ ಸ್ತಬ್ಧವಾಗಿರುತ್ತವೆ. ಮುಂದಿನ ೧೪ ದಿನಗಳ ಕಾಲ ರಸ್ತೆಯಲ್ಲಿ ಜನ ಓಡಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ. ಈಗಾಗಲೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಹುತೇಕ ರಸ್ತೆಗಳಿಗೆ ಬ್ಯಾರಿಕೇಡ್ ಸಿದ್ಧಪಡಿಸಿಕೊಂಡಿದೆ. ಇಂದು ರಾತ್ರಿ ೯ ಗಂಟೆಯಂದ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಎಲ್ಲೆಡೆ ಬ್ಯಾರಿಕೇಡ್ ಹಾಕಲಾಗುತ್ತದೆ. ನಾಳೆಯಿಂದ ಕೇವಲ ಸರ್ಕಾರಿ ನೌಕರರು ಹಾಗೂ ಅಗತ್ಯ ಸೇವೆಯಲ್ಲಿರುವವರಿಗೆ ಮಾತ್ರ ತಮ್ಮ ತಮ್ಮ ಕಛೇರಿಗೆ ಹೋಗಲು ಅವಕಾಶ ನೀಡಲಾಗುತ್ತದೆ.
  ಸಾರ್ವಜನಿಕರು ಯಾವುದೇ ಕಾರಣವಿಲ್ಲದೇ, ಓಡಾಡವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಪೊಲೀಸರು ಇಡೀ ದಿನ ಕಾರ್ಯ ನಿರ್ವಹಿಸಿ, ಜನರ ಓಡಾಟ ನಿಯಂತ್ರಿಸಲಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯ ಓಡಾಟ ನಡೆಸದೇ ಮನೆಗಳಲ್ಲಿದ್ದು, ಕೊರೊನಾ ಮಹಾಮಾರಿಯನ್ನು ಓಡಿಸಲು ಕೈಜೋಡಿಸಿ.