ಇಂದು ಮತ್ತೊಮ್ಮೆ ಸೂಪರ್ ಮೂನ್

ನವದೆಹಲಿ,ಸೆ.೨೮-ಈ ವರ್ಷದ ಕೊನೆಯ ಸೂಪರ್‌ಮೂನ್ ಇಂದು ಸೂರ್ಯಾಸ್ತದ ನಂತರ ತಕ್ಷಣ ಗೋಚರಿಸುತ್ತದೆ. ಇದು ವರ್ಷದ ನಾಲ್ಕನೇ ಮತ್ತು ಕೊನೆಯ ಸೂಪರ್‌ಮೂನ್ ಇದಾಗಿದ್ದು ಇದನ್ನು ಹಾರ್ವೆಸ್ಟ್ ಮೂನ್ ಎಂದು ಕರೆಯಲಾಗುತ್ತದೆ.
ಹಾರ್ವೆಸ್ಟ್ ಮೂನ್‌ನೊಂದಿಗೆ, ೨೦೨೩ ರ ಸೂಪರ್ ಮೂನ್ ಸರಣಿಯೂ ಕೊನೆಗೊಳ್ಳುತ್ತದೆ.
ಚಂದ್ರನು ತನ್ನ ದೀರ್ಘವೃತ್ತದ ಕಕ್ಷೆಯಲ್ಲಿ ಭೂಮಿಗೆ ಹತ್ತಿರವಾದಾಗ ಸೂಪರ್‌ಮೂನ್ ಸಂಭವಿಸುತ್ತದೆ, ಅದರ ಹೆಚ್ಚಿದ ಗಾತ್ರ ಮತ್ತು ಹೆಚ್ಚಿದ ಪ್ರಕಾಶದಿಂದಾಗಿ ಚಂದ್ರನು ತನಗಿಂತ ಹೆಚ್ಚು ದೊಡ್ಡದಾಗಿ ಕಾಣಿಸಿಕೊಳ್ಳುತ್ತಾನೆ.
ಆಕಾಶದಲ್ಲಿ ಚಂದ್ರನ ಹೊಳಪಿನ ಹೆಚ್ಚಳವು ಗುರುವಾರ ರಾತ್ರಿಯಿಂದಲೇ ಪ್ರಾರಂಭವಾಗಲಿದೆ ಮತ್ತು ಇದು ಶುಕ್ರವಾರ ಬೆಳಗಿನವರೆಗೆ ಮುಂದುವರಿಯುತ್ತದೆ.
ಅತಿದೊಡ್ಡ ಖಗೋಳ ಘಟನೆಗಳಲ್ಲಿ ಒಂದಾದ ಸೂಪರ್‌ಮೂನ್ ರಾತ್ರಿಯಲ್ಲಿ, ಚಂದ್ರನು ದೊಡ್ಡದಾಗಿ ಮತ್ತು ಪ್ರತಿದಿನಕ್ಕಿಂತ ಪ್ರಕಾಶಮಾನವಾಗಿ ಗೋಚರಿಸುತ್ತಾನೆ.
ಈ ವರ್ಷದ ಆರಂಭದಲ್ಲಿ ನಮಗೆ ಮೂರು ಸೂಪರ್‌ಮೂನ್‌ಗಳನ್ನು ನೋಡುವ ಅವಕಾಶ ಸಿಕ್ಕಿತು. ಸೂಪರ್ ಮೂನ್‌ಗೆ ಸ್ಟ್ರಾಬೆರಿ ಮೂನ್ ಎಂದೂ ಕರೆಯುತ್ತಾರೆ. ಈ ವರ್ಷದ ಮೊದಲ ಸೂಪರ್ ಮೂನ್ ಜುಲೈ ೩ ರಂದು ಗೋಚರಿಸಿತು. ಇದರ ನಂತರ ಆಗಸ್ಟ್ ೧ ಮತ್ತು ಆಗಸ್ಟ್ ೩೦ ರಂದು ಮತ್ತೆ ಕಾಣಿಸಿಕೊಂಡಿತ್ತು.
ಸೆಪ್ಟೆಂಬರ್‌ನಲ್ಲಿ ಸಂಭವಿಸುವ ಸೂಪರ್‌ಮೂನ್‌ನನ್ನು ಹಾರ್ವೆಸ್ಟ್ ಮೂನ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ಸೆಪ್ಟೆಂಬರ್‌ನ ಸೂಪರ್‌ಮೂನ್‌ನಿಂದಾಗಿ, ಬೆಳಕು ತಡರಾತ್ರಿಯವರೆಗೂ ಇರುತ್ತದೆ. ಹಿಂದೆ ರೈತರಿಗೆ ಬೆಳೆ ಕೊಯ್ಲಿಗೆ ಇಂದಿನಂತೆ ಆಧುನಿಕ ಕೃಷಿ ಸಾಮಗ್ರಿಗಳು ಇರಲಿಲ್ಲ. ಆದ್ದರಿಂದ ರೈತರು ಬೆಳೆಗಳನ್ನು ಕೊಯ್ಲು ಮಾಡಲು ಹುಣ್ಣಿಮೆಯ ಬೆಳಕಿನ ಮೇಲೆ ಅವಲಂಬಿತರಾಗಿದ್ದರು.
ಆಗ ಇದರಿಂದ ರೈತರಿಗೆ ಬೆಳೆ ಕೊಯ್ಲು ಮಾಡಲು ಹೆಚ್ಚಿನ ಸಮಯ ಸಿಗುತ್ತಿತ್ತು. ಆದ್ದರಿಂದ ಸೆಪ್ಟೆಂಬರ್‌ನಲ್ಲಿ ಸಂಭವಿಸುವ ಸೂಪರ್‌ಮೂನ್‌ಗೆ ಹಾರ್ವೆಸ್ಟ್ ಮೂನ್ ಎಂದು ಹೆಸರಿಸಲಾಯಿತು.

ಸೂಪರ್ ಮೂನ್ ಎಂದರೆ ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಸಮೀಪದಲ್ಲಿರುತ್ತಾನೆ. ಇದನ್ನು ಪೆರಿಜಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಇದರಲ್ಲಿ ಚಂದ್ರನು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸುತ್ತಾನೆ. ಸೂಪರ್‌ಮೂನ್ ಎಂಬುದು ೧೯೭೦ರ ದಶಕದಲ್ಲಿ ಜ್ಯೋತಿಷಿ ರಿಚರ್ಡ್ ನೊಲ್ ಅವರು ಸೃಷ್ಟಿಸಿದ ಪದವಾಗಿದೆ.