ಇಂದು ಮಂಗಳೂರಿನಲ್ಲಿ ’ಪೇಜಾವರ ವಿಶ್ವೇಶತೀರ್ಥ ನಮನ’

ಮಂಗಳೂರು, ಡಿ೨೯-ಹರಿಪಾದಗೈದಿರುವ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣಾರ್ಥ ಕಲ್ಕೂರ ಪ್ರತಿಷ್ಠಾನವು “ಪೇಜಾವರ ವಿಶ್ವೇಶತೀರ್ಥ ನಮನ-೨೦೨೦” ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇಂದು (ಡಿ. ೨೯) ಮಂಗಳವಾರ ಸಂಜೆ ೪ ಗಂಟೆಗೆ, ಕದ್ರಿ ಮಲ್ಲಿಕಾ ಬಡವಾಣೆಯ ಮಂಜು ಪ್ರಾಸಾದದ ’ವಾದಿರಾಜ ಮಂಟಪದಲ್ಲಿ ಸಮಾರಂಭ ನಡೆಯಲಿದ್ದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಉಪಸ್ಥಿತರಿದ್ದು ಅನುಗ್ರಹ ಭಾಷಣ ಮಾಡಲಿರುವರು.

ಎಸ್. ಪ್ರದೀಪ ಕುಮಾರ ಕಲ್ಕೂರವರ ಅಧ್ಯಕ್ಷತೆಯಲ್ಲಿ ಜರಗಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ದೀಪ ಪ್ರಜ್ವಲನೆಗೊಳಿಸಲಿರುವರು. ಮೇಯರ್ ಕೆ. ದಿವಾಕರ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಪುಷ್ಪನಮನ ಸಲ್ಲಿಸಲಿರುವರು.   ಈ ಸಂದರ್ಭ “ಗುರುವಂದನೆ”, ಸಾಧಕ ಶ್ರೇಷ್ಠರಿಗೆ, ’ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ’ ಪ್ರದಾನ ಹಾಗೂ ನುಡಿನಮನ ಸಲ್ಲಿಸಲಾಗುವುದು. ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಮೋಹನ ಆಳ್ವ, ರಾಜಪುರೋಹಿತ ವೇ. ಮೂ ಶ್ರೀ ಗಣಪತಿ ಅಚಾರ್ಯ ಕದ್ರಿ, ತುಳು ಜನಪದ ಸಾಹಿತಿ ಪ್ರಾಧ್ಯಾಪಕ ಡಾ. ಗಣೇಶ್ ಅಮೀನ್ ಸಂಕಮಾರ್ ಹಾಗೂ ಖ್ಯಾತ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ ವಿಶ್ವೇಶತೀರ್ಥ ಶ್ರೀಪಾದಂಗಳವರ “ಸಂಸ್ಮರಣಾ” ಭಾಷಣ ಮಾಡಲಿರುವರು.

ಕೋವಿಡ್-೧೯ರ ಸರಕಾರದ ನಿಯಮಾನುಸಾರ ಕಾರ್ಯಕ್ರಮ ಆಯೋಜಿಸಲಾಗಿದ್ದು ಶ್ರೀಮತಿ ಶೀಲಾದಿವಾಕರ್ ಬಳಗದವರಿಂದ ಶಾಸ್ತ್ರೀಯ ಸಂಗೀತ ಹಾಗೂ ಸತ್ಸಂಗ ಇತ್ಯಾದಿ ನೆರವೇರಲಿರುವುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.