
ಬೆಂಗಳೂರು, ಜ.9- ಕೇಂದ್ರ ಸರ್ಕಾರದ ಸೂಚನೆಯಂತೆ ಯುಕೆಯಿಂದ ಬರುತ್ತಿರುವ ಪ್ರಯಾಣಿಕರಿಗೆ ಮತ್ತೆ ವಿಮಾನಗಳ ಹಾರಾಟ ಆರಂಭವಾಗಿದ್ದು, ರಾಜಧಾನಿ ಬೆಂಗಳೂರಿಗೆ ಇಂದು ರಾತ್ರಿ ಒಂದು ವಿಮಾನ ಆಗಮಿಸುತ್ತಿದೆ.
ನಗರದಲ್ಲಿಂದು ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಮಾರ್ಗಸೂಚಿಗಳ ಪ್ರಕಾರ 72 ಗಂಟೆ ಮೊದಲು ಆರ್ ಟಿಪಿಸಿ.ಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಸರ್ಟಿಫಿಕೇಟ್ ಇದ್ದವರಿಗೆ ಮಾತ್ರ ವಿಮಾನದಲ್ಲಿ ಬರಲು ಅನುಮತಿ ನೀಡಲಾಗಿದೆ ಎಂದರು.
ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಮತ್ತೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತದೆ. ಇದರ ಫಲಿತಾಂಶ ಬರುವವರೆಗೆ ಯಾರನ್ನೂ ಹೊರಗಡೆ ಬಿಡುವುದಿಲ್ಲ. ವಿಮಾನ ನಿಲ್ದಾಣದ ಬಳಿ ಪಾಸಿಟಿವ್ ಬಂದವರಿಗೆ ಸಾಂಸ್ಥಿಕ ಗೃಹ ಬಂಧನದಲ್ಲಿರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಜೊತೆಗೆ ಪಾಸಿಟಿವ್ ಬಂದವರ ಅಕ್ಕ-ಪಕ್ಕ, ಹಿಂದೆ-ಮುಂದೆಯಿರುವ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಸಾಂಸ್ಥಿಕ ಗೃಹಬಂಧನದಲ್ಲಿರಿಸಲಾಗುತ್ತದೆ. ಅಲ್ಲದೆ ನೆಗೆಟಿವ್ ಬಂದವರು ಮನೆಯಲ್ಲಿಯೇ 14 ದಿನ ಗೃಹ ಬಂಧನದಲ್ಲಿರಬೇಕು ಎಂದು ಹೇಳಿದರು.