ಇಂದು ಪವಾಡಪುರುಷ ಕೂಲಹಳ್ಳಿ ಶ್ರೀ ಗೋಣಿಬಸವೇಶ್ವರ ರಥೋತ್ಸವ:


ಸಂಜೆವಾಣಿ ವಾರ್ತೆ
ಹರಪನಹಳ್ಳಿ ಮಾ.20: ಕಾಯಕ ಹಾಗೂ ಕೃಷಿ ಪರಂಪರೆಯ ಪವಾಡ ಪುರುಷ ತಾಲ್ಲೂಕಿನ ಕೂಲಹಳ್ಳಿ ಗ್ರಾಮದ ಶ್ರೀ ಗೋಣಿಬಸವೇಶ್ವರ ರಥೋತ್ಸವವು ಇಂದು ಸಂಜೆ ಅಪಾರ ಭಕ್ತ ಗಣ ಸಮ್ಮುಖದಲ್ಲಿ ವೈಭವದಿಂದ ಜರುಗಲಿದೆ.
ಪ್ರತಿವರ್ಷದಂತೆ ಶುದ್ಧ ಏಕಾದಶಿ ದಿನ ಮಾ.20ರ ಸಂಜೆ ವೇಳೆ ಸಕಲ ಬಿರುದಾವಳಿಗಳಿಂದ ಶ್ರೀ ಗುರುಕೊಟ್ಟೂರೇಶ್ವರರ ಉತ್ಸವ ಮೂರ್ತಿಯನ್ನು ರಥಮಂಟಪದಲ್ಲಿ ಪ್ರತಿಷ್ಠಾಪಿಸಿ, ಅರ್ಚಕರು ಮಹಾ ಮಂಗಳಾರತಿ ನೆರವೇರಿಸುತ್ತಿದ್ದಂತಿಯೇ ಭರ್ಜರಿ ಜಯಘೋಷಗಳ ನಡುವೆ ರಥೋತ್ಸವವು ಉತ್ತರಾಭಿಮುಖವಾಗಿ ಭಕ್ತರು ಎಳೆಯಲಿದ್ದಾರೆ.
ಓಕುಳಿ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಂಸ್ಥಾನ ಮಠದ ಪಟ್ಟಾೀಶರಾದ ಚಿನ್ಮಯ ಸ್ವಾಮಿಗಳು, ಮತ್ತು ಶ್ರೀ ಕಾಶಿನಾಥಸ್ವಾಮಿಗಳ ಸಮ್ಮುಖದಲ್ಲಿ ಜಾತ್ರೆಯ ಕಾರ್ಯಕ್ರಮಗಳು ನಡೆಯಲಿವೆ. ಈ ರಥೋತ್ಸವವಕ್ಕೆ ರಾಜ್ಯ ಒಳಗೊಂಡು ನಾಡಿನಾದ್ಯಂತ ಅಪಾರ ಸಂಖ್ಯೆಯ ಭಕ್ತರು ಸೇರುತ್ತಾರೆ.
ಶಿವರಾತ್ರಿ ಅಮವಾಸ್ಯೆ ಆದ ಮೂರು ದಿನಕ್ಕೆ ಗೋಣಿಬಸವೇಶ್ವರರಿಗೆ ಕಂಕಣ ಕಟ್ಟಿ ಅಲ್ಲಿಂದ ತೇರಿನವರೆಗೆ ಪ್ರತಿ ದಿನ ಮೂರು ಬಾರಿ ಗೋಣಿಬಸವೇಶ್ವರರಿಗೆ ಪೂಜೆ, ಎಡೆ ಮಾಡುವ ಕಾರ್ಯಕ್ರಮ. ಕಂಕಣ ಕಟ್ಟಿದಾಗಿನಿಂದ ಜಾತ್ರೆ ಮುಗಿಯುವವರೆಗೂ ಪೂಜಾರಿ ಮದುಮಗನಾಗಿರುತ್ತಾನೆ. ಕಂಕಣ ಕಟ್ಟಿದಾಗಿನಿಂದ ದಿನ ನಿತ್ಯ ರಾತ್ರಿ ಗೋಣಿಬಸವೇಶ್ವರರ ಉಚ್ಚಾಯ ಎಂಟು ದಿನ ಎಳೆಯುತ್ತಾರೆ, ನಂತರ ಒಂಬತ್ತನೇ ದಿನಕ್ಕೆ ರಥೋತ್ಸವ ಜರುಗುತ್ತದೆ.
ಈ ಗೋಣಿಬಸವೇಶ್ವರರ ಮಠಕ್ಕೆ ಮೊದಲ ಪಟ್ಟಾದ್ಯಕ್ಷರು ಗೋಣಿಬಸವೇಶ್ವರರೇ ಆಗಿದ್ದು, ನಂತರ ಬಂದವರೆಲ್ಲರೂ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಎಂದೇ ನಾಮಾಂಕಿತರಾಗಿದ್ದು, ಈಗ 8ನೇ ಪಟ್ಟಾದ್ಯಕ್ಷರಾಗಿ ಪಟ್ಟದ ಚಿನ್ಮಯ ಸ್ವಾಮೀಜಿ ಕಾರ್ಯನಿರ್ವಹಿಸುವರು. ಸ್ವಾಮಿಗಳ ಸಮ್ಮುಖದಲ್ಲಿ ಜಾತ್ರೆಯ ಎಲ್ಲಾ ಕಾರ್ಯಕ್ರಮಗಳು ಜರುಗುವವು. ಕೂಲಹಳ್ಳಿ ಗೋಣಿಬಸವೇಶ್ವರ ಮಠ ಹಾಗೂ ಗೋಣಿಬಸವೇಶ್ವರರ ರಥೋತ್ಸವವು ಸರ್ವ ಧರ್ಮ ಸಮನ್ವಯದ ಸಂಕೇತವಾಗಿವೆ.
ಸರ್ವ ಜನಾಂಗದವರ ಸೇವೆ: ರಥೋತ್ಸವವನ್ನು ಸಜ್ಜುಗೊಳಿಸಲು ತಾಲೂಕಿನ ಓಬಳಾಪುರ ಗ್ರಾಮಸ್ಥರು ರಥದ ಹಬ್ಬವನ್ನು ನೀಡಿದರೆ, ಹರಪನಹಳ್ಳಿಯ ಉಪ್ಪಾರಗೇರಿಯವರು ಮಠವನ್ನು ಸುಣ್ಣ, ಬಣ್ಣಗಳಿಂದ ಅಲಂಕೃತಗೊಳಿಸುತ್ತಾರೆ. ಕೂಲಹಳ್ಳಿಯ ಗಂಟೇರ್ ಕಂಕಣ ಕಟ್ಟುವ ಸಂದರ್ಭದಲ್ಲಿ ಹಂದ್ರ ಹಾಕುವ ಸೇವೆ ಮಾಡಿದರೆ, ಅಮಾವಾಸೆಯ ಪಾಡ್ಯದಿಂದ ಏಕದಶಿಯವರೆಗು ಚಿಕ್ಕಹಳ್ಳಿಯವರು ಪಲ್ಲಕ್ಕಿ ಸೇವೆ ಮಾಡುತ್ತಾರೆ, ಬಂಡ್ರಿ ಗ್ರಾಮದವರು ಶ್ರೀಮಠದ ಸ್ವಚ್ಚತೆಗಾಗಿ ಕಸಬರಿಗಿಯನ್ನು ನೀಡುತ್ತಾರೆ. ಬಾಗಳಿಯವರು ರಥನಿರ್ಮಿಸುತ್ತಾರೆ., ಗೌರಿಹಳ್ಳಿ ಹಾಗೂ ಕೊಳಚಿ ಗ್ರಾಮದವರು ಮಠಧ ಆವರಣದ ಮುಂಬಾಗದಲ್ಲಿ ಚಪ್ಪರಕ್ಕೆ(ಹಂದ್ರ) ತೆಂಗಿನ ಗರಿ ತರುತ್ತಾರೆ. ಒಟ್ಟಿನಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ತರು ಸೇವೆಯಲ್ಲಿ ತೊಡಗಿಕೊಂಡು ರಥೋತ್ಸವದ ಯಶಸ್ವಿಗೆ ಕಾರಣರಾಗುತ್ತಿದ್ದಾರೆ.
ಹಿನ್ನೆಲೆ: ಮನುಕುಲದ ಕಲ್ಯಾಣಕ್ಕಾಗಿ, ಧರ್ಮಜಾಗೃತಿಗಾಗಿ ಹಾಗೂ ಆಚಾರ, ವಿಚಾರಗಳನ್ನು ನೆಲೆಗೊಳಿಸಲು ಮತ್ತು ಶರಣರ ಆದರ್ಶ ಗಳನ್ನು ಪುನರ್‍ಸ್ಥಾಪಿಸಲು ಅನೇಕ ಪವಾಡ ಪುರುಷರು ಜನ್ಮತಾಳಿದರು. ಅವರ ಪೈಕಿ ಮಧ್ಯ ಕರ್ನಾಟಕದ ಪಂಚಗಣಾೀಶ್ವರರಲ್ಲಿ ಒಬ್ಬರಾದ ಮದ್ದಾನೇಶ್ವರು ಮಾತ್ರ ಕನಕಾಂಬಿಕಾರನ್ನು ವಿವಾಹವಾಗುವ ಮೂಲಕ ಸಾಂಸಾರಿಕ ಬದುಕಿಗೆ ನಾಂದಿ ಹಾಡುತ್ತಾರೆ. ಮದ್ದಾನೇಶ್ವರ ಹಾಗೂ ಕನಕಾಂಬಿಕಾರ ವರಪುತ್ರರಾದÀ ಗೋಣಿಬಸವೇಶ್ವರರು ಲೋಕ ಕಲ್ಯಾಣಕ್ಕೆ 14-15ನೇ ಶತಮಾನದ ಮಧ್ಯಭಾಗದಲ್ಲಿ ಕಾಯಕ ಪರಂಪರೆಯ ಮುಖಾಂತರ ಬೇಸಾಯಕ್ಕೆ ಹುಲಿಗಳನ್ನು ಬಳಸಿಕೊಂಡಿರುವುದು, ಚಿಗಟೇರಿ ಶಿವನಯ್ಯನ ಆಜ್ಞೆಯಂತೆ ಸುಣ್ಣದ ಚೀಲದಲ್ಲಿ ಕೆರೆಗೆ ಎಸೆದಿದ್ದರು ಅವತಾರ ಪುರುಷನಾಗಿ ಬಂದು ಅನೇಕ ಪವಾಡಗಳೊಂದಿಗೆ ಭಕ್ತರ ಮನದಲ್ಲಿ ನೆಲೆಯೂರಿರುವ ಗೋಣಿಬಸವೇಶ್ವರರು ಕೂಲಹಳ್ಳಿಯಲ್ಲಿಯೇ ಐಕ್ಯರಾಗಿದ್ದಾರೆ.
ರಾಜ್ಯದ ಕೃಷಿಕರ ಜಾತ್ರೆ: ಯಾವುದೇ ಒಂದು ಜಾತಿ, ಪಂಥ ಹಾಗೂ ವರ್ಗಕ್ಕೆ ಸೀಮಿತಗೊಳ್ಳದ ಗೋಣಿಬಸವೇಶ್ವರ ಸಕಲ ಜಾತಿ, ಧರ್ಮಕ್ಕೂ ಬೇಕಾದವರಾಗಿದ್ದು ಹಾಗೂ ಕೃಷಿ ಸಂಸ್ಕೃತಿಯ ಆರಾಧ್ಯ ದೈವ. ಹಾಗಾಗಿಯೇ ಒಂದು ವಾರಗಳ ಕಾಲ ಜಾತ್ರೆ ನಡೆಯುತ್ತಿತ್ತು, ಇಂದಿಗೂ ಕೃಷಿ, ಕೂಲಿಕಾರ್ಮಿಕರಿಗೆ ಬೇಕಾದ ಸಲಕರಣೆಗಳು ಉತ್ತರ ಕರ್ನಾಟಕದ ಬಾದಮಿಯಲ್ಲಿ ಬಿಟ್ಟರೆ, ಕೂಲಹಳ್ಳಿ ಜಾತ್ರೆಯಲ್ಲಿ ದೊರೆಯಲಿವೆ, ಆದರೆ ಜಾಗತೀಕ ಬದಲಾವಣೆಯಿಂದ ಮೂರು ದಿನಗಳಿಗೆ ಸೀಮಿತವಾಗುತ್ತಿದೆ ಜಾತ್ರೆ, ಈ ನಿಟ್ಟಿನಲ್ಲಿ ವರ್ಷದಿಂದ ವರ್ಷಕ್ಕೆ ಸಕಲ ಧರ್ಮದ ಭಕ್ತರ ಸಂಖ್ಯೆ ದ್ವೀಗುಣ ಗೊಳ್ಳುತ್ತಿರುವುದು ವಿಶೇಷವಾಗಿದೆ.
ಗೋಣಿ ಬಸವೇಶ್ವವರು 16ನೇ ಶತಮಾನದಲ್ಲಿ  ನಾಡಿ ನಾದ್ಯಂತ ಸಂಚಾರ ಮಾಡಿ ಅನ್ಯಾಯ, ಅತ್ಯಾಚಾರ, ಅಧರ್ಮ ಮೌಡ್ಯತನ ಇವುಗಳನ್ನು ತನ್ನ ಪವಾಡಗಳ ಮೂಲಕ ಹೋಗಲಾಡಿಸಿದ್ದಕ್ಕೆ ವಿವಿಧೆಡೆ 777 ಮಠಗಳು ಸ್ಥಾಪನೆಯಾಗಿವೆ. ಅದರಲ್ಲಿ 145 ಮಠಗಳು ಗುರುತಿಸಲಾಗಿದ್ದು, ಉಳಿದವುಗಳ ಬಗ್ಗೆ ಸಂಶೋಧನಾ ಕಾರ್ಯ ನಡೆದಿದೆ. ಗೋಣಿಬಸವೇಶ್ವರರಿಗೆ 72 ಬಿರುದಾವಳಿಗಳು ಇವೆ.
 ಪಟ್ಟದ ಚಿನ್ಮಯ ಸ್ವಾಮೀಜಿ, ಗೋಣಿಬಸವೇಶ್ವರರ ಮಠ, ಕೂಲಹಳ್ಳಿ.
ಅಪಾರ ಭಕ್ತರನ್ನು ಹೊಂದಿರುವ ಕೂಲಹಳ್ಳಿ ಗೋಣಿಬಸವೇಶ್ವರರ ರೋಥ್ಸವವು ಸಂಭ್ರಮದಿಂದ ಜರುಗುವುದು, ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಹೆಚ್.ಕೆ.ಮಲ್ಲಪ್ಪ, ಇ.ಓ.ಧಾರ್ಮಿಕ ದತ್ತಿ ಇಲಾಖೆ, ಹರಪನಹಳ್ಳಿ.