ಇಂದು‌ ಪತ್ರಿಕಾ ವಿತರಕರ ‌ ದಿನ
ಜ್ಞಾನಭಂಡಾರ ಹೊತ್ತು ತರುವ ಪತ್ರಿಕೆ ವಿತರಕರ ಬಗ್ಗೆ ಇರಲಿ ಕರುಣೆಯ ಕಾಳಜಿ


ವರ್ಷದಲ್ಲಿ ನಾಲ್ಕು ಆದಾಯ ರಹಿತ ದಿನ ರಜೆ, 361 ದಿನ ಕೆಲಸ ಮಾಡುವ ಕಾಯಕ‌ ಜೀವಿಗಳೆಂದರೆ ಪತ್ರಿಕಾ ವಿತರಕರು. ಯುಗಾದಿ, ಗಣೇಶ ಹಬ್ಬ, ದಸರಾ ಹಾಗೂ ದೀಪಾವಳಿ ಹಬ್ಬ ಸೇರಿ ನಾಲ್ಕು ದಿನ ರಜೆ ಹೊರತು ಪಡಿಸಿ ವರ್ಷಪೂರ್ತಿ ಮಳೆ, ಚಳಿ, ಜಾತ್ರೆ, ಹುಟ್ಟು ಹಬ್ಬ, ಮದುವೆ, ಅನಾರೋಗ್ಯ, ಕುಟುಂಬದಲ್ಲಿ ವ್ಯಕ್ತಿ ಸಾವು ಸೇರಿದಂತೆ ಯಾವುದೇ ಕಾರಣ ಹೇಳದೆ ಓದುಗರ ಮನೆ ಬಾಗಿಲಿಗೆ ನಿತ್ಯ ಬೆಳಿಗ್ಗೆ ಸಕಾಲದೊಳಗೆ ಪತ್ರಿಕೆ ತಲುಪಿಸುವ ಕಾಯಕ ಶ್ರೇಷ್ಠ ಎಂದು ನಂಬಿರುವ ಪತ್ರಿಕೆ ವಿತರಕರು ಇಂದಿಗೂ ಸರ್ಕಾರದ‌ ಸೌಲಭ್ಯಗಳಿಂದ ವಂಚಿತಗೊಂಡಿದ್ದಾರೆ.
ಯಾರ ಬಳಿಯೂ ಕೈಚಾಚದ ಪತ್ರಿಕೆ ವಿತರಕರು, ಪತ್ರಿಕೆ ಹಂಚುವ ಹುಡುಗರು ಪತ್ರಿಕೆ ಹಂಚಿಕೆಯಿಂದ ಬರುವ ಅಲ್ಪ ಹಣದಲ್ಲೇ ಶಿಕ್ಷಣ, ಆರೋಗ್ಯ ಅತ್ಯಗತ್ಯತೆಗಳನ್ನು ಪೂರೈಸಿ ಕೊಂಡು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳುವಲ್ಲಿ ಮಾದರಿಯಾಗಿದ್ದಾರೆ.
ತಿಂಗಳ ಪೂರ್ತಿ ಓದುಗರ ಮನೆ ಬಾಗಿಲಿಗೆ ಪತ್ರಿಕೆ ಪೂರೈಸಿದರೂ ಪತ್ರಿಕೆ‌ ಹಂಚುವ ಹುಡುಗರಿಗೆ ಮಾಸಿಕ ಹಣ ನೀಡಲು ಆಮೇಲೆ, ನಾಳೆ ಬಾ ಎನ್ನುವ ಮಾತುಗಳು ಇನ್ನಾದರೂ ಕೊನೆಗೊಳ್ಳಬೇಕಿದೆ. ಅಗತ್ಯ ವಸ್ತುಗಳನ್ನು ಪಡೆಯಲು ಆನ್ಲೈನ್ ನಲ್ಲಿ ಮುಂಗಡವಾಗಿಯೇ ಹಣ ಪಾವತಿಸುವ ಕಾಲಮಾನದಲ್ಲೂ ಜ್ಞಾನ ಹೆಚ್ಚಿಸುವ ಪತ್ರಿಕೆಗಳನ್ನು ಹಾಕಿಸಿಕೊಂಡು ಕೆಲ ತಿಂಗಳು ಕಳೆದರೂ ಕೆಲ ಪ್ರಜ್ಞಾ ವಂತ ಓದುಗ ದೊರೆಗಳು ಪತ್ರಿಕೆ ಹಣ ನೀಡಲು ಸತಾಯಿಸುವದರಿಂದ ವಿತರಕರು ಪತ್ರಿಕೆ ವಿತರಣೆಯಿಂದ ವಿಮುಖರಾಗುತ್ತಿದ್ದಾರೆ.
ಅತ್ಯಂತ ಕಡಿಮೆ ಬೆಲೆಗೆ ಮನೆಬಾಗಿಲಿಗೆ ಪತ್ರಿಕೆ ನೀಡುವ ಏಕೈಕ ಕಾಯಕವೆಂದರೆ ಪತ್ರಿಕೆ ವಿತರಣೆ ಮಾತ್ರ.
ಪತ್ರಿಕೆ ಹಂಚುವ ಕಾಯಕ ಸ್ವಾಭಿಮಾನಿ ಬದುಕಿಗೆ ಸಹಕಾರಿಯಾಗಿದೆ. ಅಮೃತ ಮಹೋತ್ಸವ ಆಚರಣೆಮಾಡಿಕೊಂಡ ಸರ್ಕಾರ ಇನ್ನಾದರೂ ವಿತರಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕಾಳಜಿ ತೋರಲಿ ಎಂಬುದೇ ವಿತರಕರ ಒತ್ತಾಸೆಯಾಗಿದೆ.

ಬಸಾಪುರ ಬಸವರಾಜ್
ಪತ್ರಿಕೆ ವಿತರಕರು,ಹೊಸಪೇಟೆ.