ಇಂದು, ನಾಳೆ ರಾಜ್ಯದ ಕೆಲವೆಡೆ ಭಾರೀ ಮಳೆ

ಬೆಂಗಳೂರು, ಜು ೨೫- ಇಂದು ಮತ್ತು ನಾಳೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ತುಸು ದುರ್ಬಲಗೊಂಡಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಚುರುಕುಗೊಂಡಿದೆ ಎಂದು ತಿಳಿಸಿದೆ.
ಜುಲೈ.೨೫ ಮತ್ತು ೨೬ರಂದು ಕರಾವಳಿ ಜಿಲ್ಲೆಗಳಾದಂತ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಾದಂತ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ರಾಜ್ಯದ ಕೆಲವು ಭಾಗಗಳಲ್ಲಿ ಒಣ ಹವೆ ಇರಲಿದ್ದು, ಮಲೆನಾಡು, ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ತುಂತುರು ಮಳೆಯಾಗಲಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ದಾವಣಗೆರೆ, ಮೈಸೂರು ಭಾಗದಲ್ಲಿ ಮಳೆಯ ಸಿಂಚನ ಆಗಲಿದೆ. ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣೆಗೆ ನೀರು ಹರಿದು ಬರುತ್ತಿದೆ. ಆದ್ದರಿಂದ ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.

ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಜಲಾವೃತಗೊಂಡಿದ್ದ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಮಳೆ ನಿಂತ ಬಳಿಕವೂ ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಉಂಟಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ.
ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಯ ಒಂದೆರಡು ಕಡೆ ಭಾರಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಮುಂದಿನ ೪೮ ಗಂಟೆಗಳು ಹವಾಮಾನದಲ್ಲಿ ಗಮನಾರ್ಹವಾದ ಬದಲಾವಣೆಯಿಲ್ಲ ಎಂದು ಇಲಾಖೆ ಹೇಳಿದೆ. ಈ ಬಾರಿ ಯಾವುದೇ ಜಿಲ್ಲೆಗಳಿಗೂ ಹವಾಮಾನ ಇಲಾಖೆ ಅಲರ್ಟ್ ಘೋಷಣೆ ಮಾಡಿಲ್ಲ .