ಇಂದು ಅಕ್ಕಮಹಾದೇವಿ ಜಯಂತಿಸದಾಶಿವಯ್ಯನವರ ಕದಳೀವನ ಶೋಧ


ಶ್ರೀಶೈಲ ಪೀಠದ ಪಟ್ಟಾಧ್ಯಕ್ಷ ಶ್ರೀವೀರ ಭಿಕ್ಷಾ ವೃತ್ತಿ ಮಹಾಸ್ವಾಮಿಗಳವರು ಶ್ರೀ ಪುಷ್ಪಗಿರಿ ಮಠದವರ ಮೇಲೆ ವ್ಯಾಜ್ಯವನ್ನು ಹೂಡಿದರು. ಬಳ್ಳಾರಿಯ ಟಿ.ಹೆಚ್.ಎಂ. ಸದಾಶಿವಯ್ಯನವರು ನ್ಯಾಯವಾದಿ ಸ್ಥಾನವನ್ನು ಪಡೆದ ನಂತರ ಈ ವ್ಯಾಜ್ಯವನ್ನು ನಡೆಸುವ ಹೊರೆಯನ್ನು ಹೊತ್ತರು.‌
ಅವರು ಈ ಕ್ಷೇತ್ರವು ಮೊದಲಿನಿಂದಲೂ ಭಿಕ್ಷಾವೃತ್ತಿ ಮಠಾಧೀಶ್ವರರ ಆಡಳಿತದಲ್ಲಿತ್ತೆಂದು ರುಜುಪಡಿಸಲು ಸಾಕ್ಷಿಗಳನ್ನು ಶೇಕರಿಸಬೇಕಾಗಿ ಬಂದಿತು. ಆ ಸಂದರ್ಭದಲ್ಲಿ ಸದಾಶಿವಯ್ಯನವರು ಪಾದಚಾರಿಯಾಗಿ ಶ್ರೀ ಶೈಲಕ್ಕೆ ಹೋದರು. ಆಗ ಘಂಟಾ ಮಠದಲ್ಲಿ ಶ್ರೀ ವೀರಭದ್ರ ಸ್ವಾಮಿಗಳೆಂಬ ಶಿವಯೋಗಿಗಳು ಯೋಗಸಾಧನೆಯಲ್ಲಿದ್ದರು.
ಅವರ ಸುದೀರ್ಘ ಕಾಯ ಜಟಾಜೂಟಗಳು ನೆಲಕ್ಕೆ ಮುಟ್ಟುತ್ತಿದ್ದ ನಖಗಳು ನನ್ನನ್ನು ವಿಭ್ರಮೆಗೊಳಿಸಿದವು. ಅವರು ತಮ್ಮ ಜೀವನವನ್ನೆಲ್ಲಾ ಶ್ರೀ ಶೈಲದಲ್ಲೇ ಕಳೆದರು. ತಮ್ಮ ಯೋಗಸಾಧನೆಗಾಗಿ ಆಗಿಂದಾಗ್ಗೆ ಕದಳೀವನ, ಬಿಲ್ವ ವನಗಳಿಗೆ ಸಹಾ ಹೋಗುತ್ತಿದ್ದರಂತೆ.
ಅಂದಿನಿಂದ ನನಗೆ ಒಮ್ಮೆಯಾದರೂ ಆ ಕದಳೀ ವನ ಬಿಲ್ವ ವನಗಳನ್ನು ದರ್ಶಿಸಬೇಕೆಂಬ ಆಕಾಂಕ್ಷೆಯು ಬಲವಾಗಿ ಆರೂಡಗೊಂಡಿತು. ಕದಳೀವನವು ಅವರ ಕನಸಿನ ಬೀಡಾಯಿತು. ಅಕ್ಕಮಹಾದೇವಿಯ ಅವರ ಆರಾಧ್ಯ ಯೋಗಿಣಿಯಾದಳು.
ಈ ಕ್ಷೇತ್ರದ ಬಗ್ಗೆ ಮತ್ತು ಅಕ್ಕನವರ ಬಗ್ಗೆ ದೊರೆಯಬಹುದಾದ ಎಲ್ಲಾ ಸಾಹಿತ್ಯ ಸಾಮಾಗ್ರಿಗಳನ್ನು ಸಂಗ್ರಹಿಸಬೇಕೆಂಬ ಹಂಬಲವೂ ಬಲವಾಗಿ ಬೇರೂರಿತು. ಮುಂದೆ ಅವರು ಕರ್ನೂಲು ಜಿಲ್ಲೆಯಲ್ಲಿ 5-6 ವರ್ಷಗಳು ಡಿಸ್ಟ್ರಿಕ್ಟ್ ಮುನಿಸಿಫ್ ಡಿ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ನ್ಯಾಯಾಧೀಶನಾಗಿ ಇದ್ದ ಸಂದರ್ಭದಲ್ಲಿ ಶ್ರೀ ಶೈಲ ಸಾಮ್ರಾಜ್ಯಕ್ಕೆ ಸಂಬಂಧಿಸಿದ ತ್ರಿಪುರಾಂತಕೇಶ್ವರ, ನವನಂದಿಮಂಡಲ, ಸಿದ್ಧವಟ, ಓಂಕಾರ, ಅಲಂಪುರ, ಸಂಗಮೇಶ್ವರ ಮುಂತಾದ ದಿವ್ಯ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿರುವ ಶಾಸನ ಸಾಮಾಗ್ರಿಗಳನ್ನು ಸಂಗ್ರಹಿಸಿದವರು. ತ್ರಿಕೂಟ ಪರ್ವತಗಳನ್ನು ನೋಡಬೇಕೆಂಬ ಆಕಾಂಕ್ಷೆಯಿಂದ ಅಗಾಧವಾದ ಪಾತಾಳ ಗಂಗೆಯನ್ನು ಈಜಿ ದಾಟಿದೆನು. ಪಾತಾಳ ಗಂಗೆಯ ದಡದಲ್ಲಿ ಅಕ್ಕಮಹಾದೇವಿಯ ಗವಿ ಎಂದು ಸಾಂಪ್ರದಾಯಿಕವಾಗಿ ಕರೆಯಲ್ಪಡುತ್ತಿರುವ ಒಂದು ಗವಿಯನ್ನು ಸಂದರ್ಶಿಸಿದರು.
ಆದರೆ ಅಲ್ಲಿ ಅಕ್ಕನವರ ಕುರುಹುಗಳೇನು ಕಂಡುಬರಲಿಲ್ಲ. ಕರ್ನೂಲ್ ಮೆಕೆಂಜಿ ಎಂಬೋರ್ವ ಆಂಗ್ಲ ಪಂಡಿತರು ಶ್ರೀಶೈಲ ದೇವಾಲಯದ ಶಿಲ್ಪಕಲೆಯ ಬಗ್ಗೆ ಒಂದು ಅಮೋಘ ಲೇಖನವನ್ನು ಬರೆದಿರುವರು. ಆ ಲೇಖನದಲ್ಲಿ ದೇವಸ್ಥಾನದ ಪ್ರಾಕಾರದ ಗೋಡೆಗಳ ಮೇಲೆ ಕೆತ್ತಲ್ಪಟ್ಟಿರುವ ಚಿತ್ರಗಳ ವಿವರಣೆಗಳನ್ನೆಲ್ಲಾ ಕೊಟ್ಟಿರುವರು. ಒಂದು ಅಪೂರ್ವ ಚಿತ್ರವನ್ನು ಹೀಗೆಂದು ವರ್ಣಿಸಿರುವರು “ಒಂದು ಬಾಳೆಯ ಗಿಡ ಅದರ ಕೆಳಗೆ ಒಂದು ಶಿವಲಿಂಗ, ಆ ಶಿವಲಿಂಗದಿಂದ ಎರಡು ಹಸ್ತಗಳು ಹೊರಚಾಚಲ್ಪಟ್ಟಿದ್ದು ಯಾರನ್ನೋ ಆಹ್ವಾನಿಸುವಂತಿವೆ. ಆ ಶಿವಲಿಂಗದ ಮುಂದೆ ಓರ್ವ ನಗ್ನ ಸ್ತ್ರೀ ಕೈಯಲ್ಲಿ ರುದ್ರಾಕ್ಷಿ ಮಾಲೆ ಲಿಂಗದ ಬಳಿಗೆ ಧಾವಿಸುತ್ತಿರುವಳು” ಅವರ ಮೂರನೇ ಪ್ರವಾಸವು ಈ ಶಿಲಾಚಿತ್ರದ ಶೋಧೆಗಾಗಿಯೇ ಅಂಕಿತಗೊಳಿಸಲ್ಪಟ್ಟಿತು. 3-4 ಸಲ ದೇವಸ್ಥಾನದ ಪ್ರಾಕಾರವನ್ನೇಲ್ಲಾ ಸುತ್ತಿದ್ದಾಯಿತು. ಕೊನೆಗೆ ದೇವಸ್ಥಾನದ ಪ್ರಾಕಾರದ ಎಡಭಾಗದ ಗೋಡೆಯ ಮೇಲೆ ದೊರಕಿತು. ಹೊಗೆಯ ಕಪ್ಪಿನಿಂದ ಮುಸುಕಿದ್ದ ಆ ಭಾಗವನ್ನು ಶುಭ್ರಗೊಳಿಸಿ ಎಣ್ಣೆ ಮಜ್ಜಿನ ಮಾಡಿ ಅದರ ಫೋಟೋ ತೆಗೆದುಕೊಂಡೆನು. ಈ ಪ್ರಾಕಾರವು ಕಾಕತೀಯ ಯುಗದಲ್ಲಿ ಕಟ್ಟಲ್ಪಟ್ಟದ್ದು ಶ್ರೀಶೈಲ ಕ್ಷೇತ್ರದ ಇತಿಹಾಸಕ್ಕೆ ಸಂಬಂಧಿಸಿದ ಮೂವರು ಶರಣೆಯರಾದ ಪುರಾಣ ಕಾಲದ ಚಂದ್ರಾವತಿ, 12ನೆ ಶತಮಾನದ ಅಕ್ಕಮಹಾದೇವಿ, ಮತ್ತು ಮಧ್ಯಯುಗದ ಹೇಮರೆಡ್ಡಿ ಮಲ್ಲಮ್ಮ, ಶರಣೆ ಮಲ್ಲಮ್ಮ ಶಿಲಾವಿಗ್ರಹವು ದೇವಸ್ಥಾನದಲ್ಲಿದೆ.
ಚಂದ್ರಾವತಿಯು ಮಲ್ಲಿಕಾರ್ಜುನ ಲಿಂಗವನ್ನು ಮಲ್ಲಿಗೆ ಹೂವುಗಳಿಂದ ಪೂಜಿಸಿದ ಚಿತ್ರವು ಸಹ ಪ್ರಾಕಾರದ ಗೋಡೆಯ ಮೇಲಿದೆ. ಅಕ್ಕಮಹಾದೇವಿಯು ಸಿದ್ಧಿಪಡೆದ ಆ ಚಿರಕಾಲದಲ್ಲಿ ನಿರ್ಮಿತವಾದ ಪ್ರಾಕಾರದ ಗೋಡೆಯ ಮೇಲೆ ಅವರು ಲಿಂಗೈಕ್ಯವಾಗುವ ಚಿತ್ರವು ಕೆತ್ತಲ್ಪಟ್ಟಿರುವುದು. ಕಾರಣ ಅಕ್ಕಮಹಾದೇವಿಯು ಕಾಲ್ಪನಿಕ ವ್ಯಕ್ತಿಯಲ್ಲ. ಐತಿಹಾಸಿಕ ವ್ಯಕ್ತಿ. ಕದಳೀ ವನವು ಕಾಣಬಾರದ ಕನಸಿನ ಬೀಡಲ್ಲ. ಮಲ್ಲಿಕಾರ್ಜುನನೇ ಅಪ್ಪಣೆಕೊಟ್ಟಿರುವಂತೆ ಅದು ದುರ್ವಾರಕಾಂತರ ಘನ ಬಿಲಾಂತರ ಮಹಾ ಗಹ್ವರಗಳಲ್ಲಿರುವ ಒಂದಾನೊಂದು “ಏಕಾಂತವಾಸ” ದ ಪ್ರಾಂತವು. ಅದನ್ನು ಕಾಣುವ ಪುಣ್ಯವು ಮಾತ್ರ ನಮಗೆ ಬೇಕು. ಅದನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಬೇಕೆಂಬ ಉದ್ಧೇಶದಿಂದಲೇ  ಸದಾಶಿವಯ್ಯನವರು ನಾಲ್ಕನೇ ಪ್ರವಾಸವನ್ನು ಕೈಗೊಂಡರು.
ಶಿಖರೇಶ್ವರದ ವರೆಗೂ  ಹೋಗಿ ಅಲ್ಲಿಂದ ಲಿಂಗದ ಹೊಳೆಯ ಉತ್ತರ ದಿಗ್ಭಾದಲ್ಲಿರುವ ಪರ್ವತ ಪಂಜ್ತಿಗಳನ್ನು ತೋರಿಸುತ್ತ, ಕದಳೀ ವನವು ಎಲ್ಲಿರಬಹುದೆಂಬುದನ್ನು ಸಹಾ ತೋರಿಸದರು. ಆ ವಿಹಂಗಮ ದೃಷ್ಟಿಯ ಫೋಟೋವನ್ನು ಸಹಾ ತಗೆದುಕೊಂಡರು. ಆದರೆ ಬಿಸಿಲಿನ ತಾಪವು ಸಹಿಸಲಶಕ್ಯವಾಗಿದ್ದುದರಿಂದ ಅವರು ಸಂಶೋಧನೆಯ ಪ್ರಯತ್ನವನ್ನು ಮುಂದೂಡಿದರು.
ಈಗ ಅವರಿಗೆ ದೊರೆತಿರುವ ಸಮಾಚಾರದ ಮೇರೆಗೆ ಕದಳೀವನಕ್ಕೆ ಹೋಗಬೇಕಾದರೆ ಲಿಂಗದ ಹೊಳೆಯನ್ನು ಧಾಟಿ ಪೂರ್ವಾಭಿಮುಖವಾಗಿ ಸುಮಾರು 8 ಮೈಲುಗಳವರೆಗೂ ಬೆಟ್ಟದ ಪಂಕ್ತಿಗಳನ್ನು ಏರುತ್ತಾ, ಇಳಿಯುತ್ತಾ ಗವಿಗಳಲ್ಲಿ ದೂರುತ್ತಾ ಘೋರಾರಣ್ಯವನ್ನು ಧಾಟಿ ಹೋಗಬೇಕು. ಅಲ್ಲಿ ಮಾನವ ಸಂಚಾರವಿಲ್ಲ. ವನ್ಯ ಮೃಗಗಳು ನಿರಾತಂಕವಾಗಿ ತಿರುಗಾಡುತ್ತಿದ್ದವು ಎಂದಿದ್ದಾರೆ.
ಟಿ.ಹೆಚ್.ಎಂ.ಬಸವರಾಜ್
ಅಧ್ಯಕ್ಷರು
ಕರ್ನಾಟಕ ಇತಿಹಾಸ ಅಕಾಡೆಮಿ, ಬಳ್ಳಾರಿ