ಇಂದುಆರ್‌ಸಿಬಿ, ಸನ್ ರೈಸರ್ಸ್ ನಡುವೆ ಸೆಣಸಾಟ

ದುಬೈ, ಸೆ ೨೧- ಹೊಸ ಉತ್ಸಾಹದಲ್ಲಿ ಪುಟಿದೆದ್ದಿರುವ ಆರ್‌ಸಿಬಿ ತಂಡ ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಿ ಶುಭಾರಂಭ ಮಾಡುವ ತವಕದಲ್ಲಿದೆ.
ಕಳಪೆ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲಲೇ ಬೇಕು ಎನ್ನುವ ಛಲದಿಂದ ಕಣಕ್ಕೆ ಇಳಿಯಲಿದೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಉಣಿಸಲು ಸಜ್ಜಾಗಿದೆ. ಸಾಕಷ್ಟು ಹೊಸತನದೊಂದಿಗೆ ಇಂದಿನ ಚೊಚ್ಚಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲು ಆರ್ ಸಿ ಬಿ ಸಜ್ಜಾಗಿದೆ.
ಈ ಬಾರಿ ಕೊಹ್ಲಿ ಪಡೆಯಲ್ಲಿ ಯುವ ಹಾಗೂ ಅನುಭವಿ ಆಟಾಗರರು ಕಣಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಈ ಬಾರಿ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸದಲ್ಲಿದೆ.
ವಿರಾಟ್ ಮತ್ತು ಡಿವಿಲಿಯರ್ಸ್ ಅವರಲ್ಲದೆ, ಆಸ್ಟ್ರೇಲಿಯಾದ ನಾಯಕ ಫಿಂಚ್, ಮೊಯಿನ್ ಅಲಿ, ಯುಜ್ವೇಂದ್ರ ಚಾಹಲ್, ಕ್ರಿಸ್ ಮಾರಿಸ್, ಉಮೇಶ್ ಯಾದವ್ ಮತ್ತು ನವದೀಪ್ ಸೈನಿ ಅವರ ರೂಪದಲ್ಲಿ ಬೆಂಗಳೂರಿನಲ್ಲಿ ಹಲವಾರು ಉತ್ತಮ ಆಟಗಾರರಿದ್ದಾರೆ. ಇಂಗ್ಲೆಂಡ್‌ನಿಂದ ಏಕದಿನ ಸರಣಿಯನ್ನು ಗೆದ್ದ ನಂತರ ಫಿಂಚ್ ಐಪಿಎಲ್‌ಗೆ ಕಾಲಿಡುತ್ತಿದ್ದಾರೆ.
ಇಂಗ್ಲೆಂಡ್‌ನಲ್ಲಿ ವಾರ್ನರ್‌ನ ಸಾಧನೆ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಆದರೆ ಐಪಿಎಲ್ ನಲ್ಲಿ ಅವರು ಹೆಚ್ಚು ರನ್ ಬಾರಿಸಿ ಮಿಂಚಿದ್ದಾರೆ. ಹೈದರಾಬಾದ್‌ನ ಬ್ಯಾಟಿಂಗ್ ವಾರ್ನರ್ ಹೊರತಾಗಿ ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋ ಮತ್ತು ಮನೀಶ್ ಪಾಂಡೆ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ.
ಈವರೆಗೆ ಆರ್ಸಿಬಿ ಹಾಗೂ ಸನ್ರೈಸರ್ಸ್ ೧೪ ಬಾರಿ ಮುಖಾಮುಖಿ ಆಗಿದ್ದಾರೆ. ಆರ್ಸಿಬಿ ೬ ಹಾಗೂ ಸನ್ರೈಸರ್ಸ್ ೭ ಪಂದ್ಯವನ್ನು ಗೆದ್ದರೆ, ಒಂದು ಪಂದ್ಯ ರದ್ದಾಗಿದೆ. ಹೀಗಾಗಿ, ಬಲಾಬಲದಲ್ಲಿ ಇಬ್ಬರೂ ಬಹುತೇಕ ಸಮವಾಗಿದ್ದಾರೆ.
ಹೈದರಾಬಾದ್ ತಂಡದಲ್ಲಿ ಇಬ್ಬರು ಅಫ್ಘಾನಿಸ್ತಾನ ಆಟಗಾರರಾದ ಮೊಹಮ್ಮದ್ ನಬಿ ಮತ್ತು ವಿಶ್ವದ ಅತ್ಯುತ್ತಮ ಲೆಗ್ ಸ್ಪಿನ್ನರ್ ರಶೀದ್ ಖಾನ್ ಇದ್ದಾರೆ.
ತಂಡದ ವೇಗದ ಬೌಲಿಂಗ್ ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಮತ್ತು ಸಿದ್ಧಾರ್ಥ್ ಕಾಲ್ ಅವರ ಮೇಲೆ ಅವಲಂಬಿತವಾಗಿರುತ್ತದೆ.
ಪಂದ್ಯ ನಡೆಯುವ ಸ್ಥಳ: ದುಬೈ
ಸಮಯ: ರಾತ್ರಿ ೭:೩೦