ಇಂದಿರಾ ಸರ್ಕಲ್ ನಲ್ಲಿ ನೀರಿನ ಕಾರಂಜಿ

ಬಳ್ಳಾರಿ, ಡಿ.30: ನಗರದ ಇಂದಿರಾ ಸರ್ಕಲ್ ನಲ್ಲಿ ನಿರ್ಮಾಣ ಮಾಡಿರುವ ನೀರಿನ ಕಾರಂಜಿಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು.
ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಇಂದಿರಾ ಸರ್ಕಲ್ ನ ನೀರಿನ ಕಾರಂಜಿ ಕಾಮಗಾರಿ ಇದೀಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ, ಲೈಟ್ ಗಳನ್ನು ಅಳವಡಿಸುವ ಕಾರ್ಯ ನಡೆದಿದೆ.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ವೃತ್ತದ ಅಭಿವೃದ್ಧಿ ಕಳೆದ ಮೂರು ವರ್ಷಗಳಿಂದ ನಡೆದಿದೆ. ಈಗಾಗಲೇ ಇಲ್ಲಿ ಟ್ರಾಫಿಕ್ ಲೈಟ್ ಗಳನ್ನು ಅಳವಡಿಸಲಾಗಿದ್ದರೂ ಈ ವರೆಗೆ ಅವು ಕಾರ್ಯಾರಂಭ ಮಾಡಿಲ್ಲ.
ಈ ಸರ್ಕಲ್ ನಲ್ಲಿ ನೀರಿನ ಕಾರಂಜಿ ಆರಂಭಗೊಂಡರೆ ನಗರದಲ್ಲಿ ಇಂತಹ ವ್ಯವಸ್ಥೆ ಹೊಂದಿದ ಮೊದಲ ಸರ್ಕಲ್ ಇದಾಗಲಿದೆ. ಲಕ್ಷಾಂತರ ರೂಪಾಯಿ ವೆಚ್ಚದಿಂದ ಈ ರೀತಿ ವ್ಯವಸ್ಥೆ ಮಾಡಿದರೆ ಸಾಲದು ನಿರ್ವಹಣೆ ಸಹ ಆಗಬೇಕು. ಇಲ್ಲದಿದ್ದರೆ ರಾಜಕುಮಾರ್, ವಿಷ್ಣುವರ್ಧನ್, ಪಟೇಲ್ ನಗರ ಪಾರ್ಕ್ ಗಳಲ್ಲಿ ನೀರಿನ ಕಾರಂಜಿ ಅಳವಡಿಸಿ ಈಗ ಅವು ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿವೆ. ಮತ್ತೆ ಅವುಗಳ ದುರಸ್ಥಿಗೆ ಮುಂದಾಗಿಲ್ಲ.