ಇಂದಿರಾ ಕ್ಯಾಂಟೀನ್ ರುಚಿ ಬದಲಾಗುತ್ತಾ?


ಎನ್.ವೀರಭದ್ರಗೌಡ
ಬಳ್ಳಾರಿ, ಜೂ.15: ಬಡ ಜನತೆ ಹಸಿವಿನಿಂದ ಬಳಲಬಾರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೇವಲ 10 ರೂಗೆ ಉಪಹಾರ, ಊಟ ನೀಡುವ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿದ್ದರು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕ್ಯಾಂಟೀನ್ ಗಳು ರುಚಿ ಕಳೆದುಕೊಂಡಿದ್ದವು. ಈಗ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿದ್ದು ಇಂದಿರಾ ಕ್ಯಾಂಟೀನ್ ಗಳ ಆಹಾರದ ಪ್ರಮಾಣ ಮತ್ತು ಸ್ಥಳೀಯ ಆಹಾರ ಸಿದ್ಧಪಡಿಸಿ ನೀಡಲು ಮತ್ತಷ್ಟು ನೆರವು ಹೆಚ್ಚಿಸಲಿದೆ ಎಂದಿರುವುದು ಈ ಕ್ಯಾಂಟೀನ್ ಗಳ ರುಚಿ ಬದಲಾಗುತ್ತಾ ಎಂಬ ನಿರೀಕ್ಷೆ ಇದೆ. ಸದ್ಯ ನಗರದ ಬುಡಾ, ಜಿಲ್ಲಾ ಆಸ್ಪತ್ರೆ, ಎಪಿಎಂಸಿ, ವಿಮ್ಸ್ ಆಸ್ಪತ್ರೆ ಆವರಣ ಹಾಗೂ ಬೆಳಗಲ್ಲು ಕ್ರಾಸ್ ಬಳಿ ಈ ಇಂದಿರಾ ಕ್ಯಾಂಟೀನ್ ಗಳಿದ್ದು ಇವರಿಗೆ ಆಹಾರ ತಯಾರಿಸಿ ಸರಬರಾಜು ಮಾಡುವ ಅಡುಗೆ ಕೇಂದ್ರವು ಬುಡಾ ಆವರಣದಲ್ಲಿ ಇದೆ.
ಬೆಳಿಗ್ಗೆ ಇಡ್ಲಿ ಇಲ್ಲವೇ ಪುಳೆಯೋಗರೆ, ಫಲಾವ್, ಚಿತ್ರಾನ್ನ ಲೆಮನ್ ರೈಸ್, ಉಪ್ಪಿಟ್ಟು, ರೈಸ್ ಬಾತ್, ಬಿಸಿ ಬೆಳೆಬಾತ್, ಉಪಹಾರ ನೀಡುತ್ತೆ. ಇನ್ನು ಮಧ್ಯಾಹ್ನ ಅನ್ನ ಸಂಬಾರ್, ಮೊಸರನ್ನ ಕಡ್ಲೆಪುಡಿ ನೀಡಲಾಗುತ್ತೆ. ರಾತ್ರಿ ಸಹ ಯಾವುದಾದರೂ ಬಾತ್ ನೀಡಲಾಗುತ್ತೆ.
ರುಚಿ ಮಾತ್ರ ಸದ್ಯ ಅಷ್ಟಕಷ್ಟೇ ಆದರೂ ಕೇವಲ 10 ರೂ ಗೆ ಒಂದು ಪ್ಲೇಟ್ ದೊರೆಯುವುದರಿಂದ ಬಡ ಜನತೆ ಅದರಲ್ಲೂ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಇದನ್ನು ಊಟ ಮಾಡುತ್ತಿದ್ದಾರೆ. ಸರ್ಕಾರ ಕ್ಯಾಂಟೀನ್ ಕಟ್ಟಿಸಿಕೊಟ್ಟಿದ್ದು ಅಲ್ಲಿ ನಿಗಧಿತ ಆಹಾರ ಸರಬರಾಜಿಗೆ ಗುತ್ತಿಗೆದಾರನಿಗೆ ಒಂದು ಪ್ಲೇಟ್ ಗೆ 57 ರೂ ನಿಗಧಿಪಡಿಸಿದ್ದು. ಸರ್ಕಾರ 32 ರೂ ಸಹಾಯಧನ, ಗ್ರಾಹಕ 10 ರೂ, ಉಳಿದಿದ್ದನ್ನು ಸ್ಥಳೀಯ ಸಂಸ್ಥೆಗಳು ಬರಿಸಬೇಕಿದೆ.
:ಉಂಡವರೆಷ್ಟೊ ಲೆಕ್ಕ ಮಾತ್ರ ಪಕ್ಕಾ:
ಇಲ್ಲಿ ಎಷ್ಟು ಜನ ಊಟ ಮಾಡ್ತಾರೋ, ಆದರೆ ಗುತ್ತಿಗೆದಾರರು ಮಾತ್ರ ಪ್ರತಿ ಕ್ಯಾಂಟೀನ್ ನಲ್ಲಿ 350 ಕ್ಕೂ ಹೆಚ್ಚು ಜನರ ಲೆಕ್ಕಾ ತೋರಿಸ್ತಿ ಸಹಾಯಧನ ಪಡೆಯುತ್ತಿದ್ದಾರೆ.
ಕೃಷ್ಣನ ಲೆಕ್ಕ:
ಕಳೆದ ಆರು ವಷರ್ಗಳಲ್ಲಿ ಆಹಾರ ಧಾನ್ಯ ತರಕಾರಿ, ಗ್ಯಾಸ್ ಮತ್ತಿತರೆ ವಸ್ತುಗಳ ಬೆಲೆ ಶೇ 30 ರಿಂದ 40 ರಷ್ಟು ಹೆಚ್ಚಳವಾಗಿದ್ದರೂ ಇವರಿಗೆ ನೀಡುವ ಸಹಾಯಧನದ ಪ್ರಮಾಣ ಹೆಚ್ಚಿಸದಿದ್ದರೂ ಗುತ್ತುಗೆದಾರ ನಡೆಸಿಕೊಂಡು ಹೋಗುತ್ತಿರುವುದು ಅವರ ಕೃಷ್ಣನ ಲೆಕ್ಕದಿಂದಲೇ ಎಂಬ ಮಾತಿದೆ.
ಸೌಲಭ್ಯಗಳು ಹಾಳಾದವು:
ಮೊದಲು ಈ ಕ್ಯಾಂಟಿನಲ್ಲಿ ಕೈ ತೊಳೆಯುವ, ಸೊಳ್ಳೆಗಳು ಬರದಂತೆ ಯಂತ್ರ, ಪ್ಯಾನ್ ಮೊದಲಾದ ಸೌಲಭ್ಯಗಳು ಇದ್ದವು ಈಗ ಅವೆಲ್ಲ ಮಂಗಮಾಯವಾಗಿವೆ. ಕುಡಿಯಲು ನೀರು ಮಾತ್ರ ಕ್ಯಾನ್ ಗಳಿಂದ ಸರಬರಾಜಗುತ್ತಿದೆ.
ರುಚಿಗೆ ಸೈಡ್ ಬೇಕು:
ಉಪಹಾರ, ಊಟದ ರುಚಿಯ ಕೊರತೆಯಿಂದ ಸೈಡ್ ಬೇಕಿನಿಸುತ್ತೆ. ಅದಕ್ಕಾಗಿ ಕೇಂದ್ರಗಳಲ್ಲಿ ಕೊಳವೆ  ಸಂಡಿಗೆ ಮಾರಾಟ ಮಾಡುತ್ತದೆ. ಊಟದ ಜೊತೆ ಒಂದಿಷ್ಟು ಉಪ್ಪಿನಕಾಯಿಯಾದರೂ ನೀಡಬೇಕಿತ್ತು ರುಚಿಗೆ.
ವಿದ್ಯಾರ್ಥಿಗಳೇ ಹೆಚ್ಚು.
ನಗರದ ಬುಡಾ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ  ಹಳ್ಳಿಗಳಿಂದ ಬರುವ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು. ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟಕ್ಕೆ ಬರುತ್ತಾರೆ. ರಾತ್ರಿ ಇರಲ್ಲ ಅದಕ್ಕಾಗಿ ರಾತ್ರಿ  ಹೆಚ್ಚೆಂದರೆ 50 ಊಟ ಹೋಗುತ್ತೆ ಅಷ್ಟೇ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ ಖಲೀಲ್.
ಸಿದ್ದರಾಮಯ್ಯ ಅವರು ಈಗ ನಿರ್ವಹಣ ವೆಚ್ಚವನ್ನು 20 ರೂ ಹೆಚ್ಚಿಸವುದಾಗಿ ಹೇಳಿದ್ದು. ಇನ್ನಾದರೂ ಈ ಕ್ಯಾಂಟೀನ್ ಗಳ ರುಚಿ ಉತ್ತಮವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.