ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿಗಳು

ನಗರದ ಬನಪ್ಪ ಪಾರ್ಕ್ ಹಡ್ಸನ್ ವೃತ್ತದ ಬಳಿ ಇರುವ ಇಂದಿರಾ ಕ್ಯಾಂಟೀನ್‌ಗೆ ಸಚಿವ ರಾಮಲಿಂಗಾರೆಡ್ಡಿರವರು ಇಂದು ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಕ್ಕಳೊಂದಿಗೆ ಬೆರೆತು ಮಾಹಿತಿ ಪಡೆಯುತ್ತಿರುವುದು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಕಾಂಗ್ರೆಸ್ ಮುಖಂಡರಾದ ಜಿ. ಜನಾರ್ಧನ್, ಎ. ಆನಂದ್, ಮತ್ತಿತರರು ಇದ್ದಾರೆ.

ಬೆಂಗಳೂರು, ಮೇ.೨೬- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಪ್ರತ್ಯೇಕವಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದಲ್ಲಿಂದು ಇಲ್ಲಿನ ಬನ್ನಪ್ಪ ಪಾರ್ಕಿನ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಆರಂಭ ಮಾಡಿದ್ದೆ ಕಾಂಗ್ರೆಸ್ ಸರ್ಕಾರ. ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಆಸ್ಪತ್ರೆಯಲ್ಲಿ ಕ್ಯಾಂಟೀನ್ ಆರಂಭವಾಗಿತ್ತು.
ಆದರೆ, ಬಿಜೆಪಿ ಸರ್ಕಾರ ಬಂದ ನಂತರ ಹಣ ನೀಡದೇ ಮುಚ್ಚಿ ಹೋಗಿತ್ತು. ಸಂಚು ರೂಪಿಸಿ ಕ್ಯಾಂಟೀನ್ ಬಂದ್ ಮಾಡಿದ್ದರು.ಈ ಸಂಬಂಧ ನಾವು ಹೋರಾಟ ಕೂಡ ಮಾಡಿದ್ದೇವೆ. ಈ ಇದಕ್ಕೆ ಮರು ಜೀವ ನೀಡುತ್ತೇವೆ ಎಂದರು.
ಬೆಂಗಳೂರಿಗೆ ಬೇರೆ ಬೇರೆ ಊರಿಂದ ಜನರು ಬರುತ್ತಾರೆ. ಜತೆಗೆ ಬೆಂಗಳೂರಿಗರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಆಗಲಿ ಎಂದೇ ೫ ರೂಪಾಯಿ ಗೆ ತಿಂಡಿ, ೧೦ ರೂಪಾಯಿಗೆ ಊಟ ನೀಡಲಾಗುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕ್ಯಾಂಟೀನ್‌ನಲ್ಲಿ ನೀರಿನ ಸಮಸ್ಯೆ ಇತ್ತು. ಈಗ ಅದನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ, ಸರ್ಕಾರ ಮುಂದೆ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಅಧಿಕಾರಿಯನ್ನು ನೇಮಕ ಮಾಡುವ ಅಲೋಚನೆ ಇದೆ ಎಂದು ಹೇಳಿದರು.
ಅಲ್ಲದೆ, ಬಿಜೆಪಿಯವರು ಸುಮ್ಮನೆ ಮಾತಾಡುತ್ತಾರೆ. ಅವರ ಮಾತಿಗೆ ಕಿಮ್ಮತ್ತಿಲ್ಲ. ಅವರು ನುಡಿದಂತೆ ನಡೆಯುವ ಪಕ್ಷವಲ್ಲ. ನಾವು ಕೊಟ್ಟ ನಮ್ಮ ಗ್ಯಾರಂಟಿಗಳೆಲ್ಲಾ ಜಾರಿ ಯಾಗುತ್ತವೆ. ೧೩೫ ಸ್ಥಾನ ಕಾಂಗ್ರೆಸ್ ಪಡೆದಿರುವುದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ ಎಂದೂ ತಿಳಿಸಿದರು.
ಬಿಜೆಪಿ ನಾಯಕರಾದ ಪ್ರತಾಪ್ ಸಿಂಹ, ಹಾಗೂ ಸಿಟಿ ರವಿ ಎಲ್ಲಿರಬೇಕು ಅಲ್ಲಿರಬೇಕು. ನಮ್ಮ ಸರ್ಕಾರ ಬಂದು ಕೆಲವೇ ದಿನ ಆಗಿದೆ ಈಗಲೆ ಬೊಬ್ಬೆ ಹೊಡೆಯುತ್ತಿದ್ದಾರೆ. ಮುಂದಿನ ಸಚಿವ ಸಂಪುಟದಲ್ಲಿ ಎಲ್ಲವೂ ನಿರ್ಧಾರ ಆಗಲಿದೆ. ಅಲ್ಲಿಯವರೆಗೂ ಬಿಜೆಪಿ ತಾವು ಯಾಕೆ ಸೋತಿದ್ದು ಎಂದು ಯೋಜನೆ ಮಾಡಲಿ ಎಂದು ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.