ಇಂದಿರಾ ಕ್ಯಾಂಟೀನ್‍ಗಾಗಿ ಸ್ಥಳ ಪರಿಶೀಲನೆ

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಆ3 : ರಿಯಾಯಿತಿ ದರದಲ್ಲಿ ಜನರಿಗೆ ಊಟ ಉಪಹಾರ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ಆರಂಭಿಸಲು ತಹಸೀಲ್ದಾರ, ಟಿಇಓ ಹಾಗೂ ಮುಖ್ಯಾಧಿಕಾರಿಗಳ ತಂಡವು ಪಟ್ಟಣದ ವಿವಿಧೆಡೆಗಳಲ್ಲಿ ಸ್ಥಳ ಪರೀಶೀಲನೆ ನಡೆಸಿತು.
ಕಳೆದ ಸರ್ಕಾರದಲ್ಲಿ ಆರಂಭವಾಗಬೇಕಾಗಿದ್ದ ಇಂದಿರಾ ಕ್ಯಾಂಟೀನ್ ನಿವೇಶನದ ಸಮಸ್ಯೆಯಿಂದ ಹಿನ್ನೆಡೆಯಾಗಿತ್ತು, ಆದರೆ ಪ್ರಸ್ತುತ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದು ಇಂದಿರಾ ಕ್ಯಾಂಟೀನ್ ಆರಂಭಿಸಲು ಚಾಲನೆ ಸಿಕ್ಕಿದೆ, ಇದರಿಂದ ಪಟ್ಟಣದ ಜನತೆಗೆ ಶೀಘ್ರದಲ್ಲೇ ರಿಯಾಯ್ತಿ ದರದಲ್ಲಿ ಉಪಹಾರ ಲಭ್ಯವಾಗುವ ನಿರೀಕ್ಷೆಯಿದೆ.
ಕಳೆದ 2013ರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶಾಸಕರಾಗಿ ಆಯ್ಕೆಯಾಗಿದ್ದ ಬಸವರಾಜ ಶಿವಣ್ಣನವರ, ಅದೇ ಅವಧಿಯಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲು ಮುಂದಾಗಿದ್ದರು, ಆದರೆ ಕಟ್ಟಡಕ್ಕೆ ನಿಗದಿತ ಜಾಗೆ ಹುಡುಕುವಲ್ಲಿ ಸಮಯ ಕಳೆದಿದ್ದ ಪುರಸಭೆ ಕೊನೆಗೆ ಪಟ್ಟಣದ ಹೊರಭಾಗದ ಛತ್ರರಸ್ತೆಯಲ್ಲಿ ಸ್ಥಳವೊಂದನ್ನು ಗುರ್ತಿಸಿತ್ತು, ಸರ್ಕಾರ ಬದಲಾಗಿದ್ದರಿಂದ ಯೋಜನೆ ಆರಂಭವಾಗಿರಲಿಲ್ಲ. ಇಂದಿರಾ ಕ್ಯಾಂಟೀನ್ ಆರಂಭಿಸಲು ಸೂಕ್ತ ನಿವೇಶನ ಗುರ್ತಿಸಿ ಜಿಲ್ಲಾಧಿಕಾರಿಗಳಿಗೆ ಅನುಮೋದನೆಗೆ ಕಳುಹಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ ಹಿನ್ನೆಲೆಯಲ್ಲಿ ಸ್ಥಳ ಹುಡುಕಾಟಕ್ಕೆ ಅಧಿಕಾರಿಗಳು ಹರಸಾಹಸ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ, ತಹಶೀಲ್ದಾರ ಎಸ್.ವಿ.ಪ್ರಸಾದ್, ಕಂದಾಯ ನಿರೀಕ್ಷಕ ರಾಘವೇಂದ್ರ ಕುಲಕರ್ಣಿ, ಪುರಸಭೆ ಆರೋಗ್ಯಾಧಿಕಾರಿ ತಬಸ್ಸುಮ್, ಗ್ರಾಮಲೆಕ್ಕಾಧಿಕಾರಿ ಗುಂಡಪ್ಪ ಹುಬ್ಬಳ್ಳಿ, ಮಹಾಂತೇಶ ಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.