ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ಕಡಿತ ಸಿದ್ದು ಆಕ್ರೋಶ

ಬೆಂಗಳೂರು, ಸೆ. ೧೬- ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾದ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ಕಡಿತ ಮಾಡಿರುವ ಸರ್ಕಾರದ ಕ್ರಮಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನಮ್ಮ ಸರ್ಕಾರ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್ ಗಳಿಗೆ ಅನುದಾನ ನೀಡದೆ ಬಡವರ ಹೊಟ್ಟೆ ಮೇಲೆ ಹೊಡೆಯಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದಿರಾ ಕ್ಯಾಂಟೀನ್ ಗಳಿಗೆ ೨೦೧೭-೨೦೧೮, ೨೦೧೮-೨೦೧೯ ರಲ್ಲಿ ಕ್ರಮವಾಗಿ ೧೦೦ ಮತ್ತು ೧೪೫ ಕೋಟಿ ಅನುದಾನ ನೀಡಿದ್ದ ಬೆಂಗಳೂರು ನಗರ ಪಾಲಿಕೆ ಪ್ರಸಕ್ತ ಸಾಲಿನಲ್ಲಿ ೬೦ ಕೋಟಿ ನೀಡಿದೆ ಎಂದು ಅವರು ಕಿಡಿಕಾರಿದ್ದಾರೆ.
ಕಳಪೆ ಊಟ, ತಿಂಡಿ ನೀಡಲಾಗುತ್ತಿದೆ ಎಂದು ಜನ ಇಂದಿರಾ ಕ್ಯಾಂಟೀನ್ ಗಳಿಗೆ ಬರುವುದಿಲ್ಲ ಎಂಬ ನೆಪವೊಡ್ಡಿ ಕ್ಯಾಂಟೀನ್ ಗಳನ್ನು ಮುಚ್ಚಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ಗಳಿಗೆ ಪ್ರತಿದಿನ ಬರುತ್ತಿದ್ದ ೩೦೦ ರಿಂದ ೪೦೦ ಸಂಖ್ಯೆ ಈಗ ೫೦ ರಿಂದ ೧೦೦ಕ್ಕೆ ಇಳಿದಿದೆಯಂತೆ. ಹಾಗಾದರೆ ಬೆಂಗಳೂರು ನಗರದ ಬಡವರೆಲ್ಲರೂ ಶ್ರೀಮಂತರಾಗಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.