ಇಂದಿರಾ ಕ್ಯಾಂಟಿನ್‌ಗೆ ಡಿಕೆಶಿ ದಿಢೀರ್ ಭೇಟಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೯:ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಇಂದು ದಿಢೀರ್ ಎಂದು ಬೆಂಗಳೂರು ಪ್ರದಕ್ಷಿಣೆ ಕೈಗೊಂಡಿದ್ದು, ಇಂದಿರಾ ಕ್ಯಾಂಟೀನ್ ಮತ್ತು ಘನತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
ಇಂದು ಬೆಳ್ಳಂ ಬೆಳಿಗ್ಗೆಯೇ ಬಿಬಿಎಂಪಿಯ ಯಾವುದೇ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸೂಚನೆ ನೀಡದೆ ದಿಢೀರ್ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಅಲ್ಲಿನ ಆಹಾರ ಗುಣಮಟ್ಟವನ್ನು ಪರಿಶೀಲಿಸಿದರು.
ಮೊದಲು ದಾಸರಹಳ್ಳಿ ವಲಯದ ಚೊಕ್ಕಸಂದ್ರ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ಗೆ ಬೆಳಿಗ್ಗೆ ೯ರ ಸುಮಾರಿಗೆ ತೆರಳಿದ ಡಿ.ಕೆ.ಶಿ ತಿಂಡಿ ನೀಡುವಂತೆ ಕೇಳಿದರು. ಆದರೆ ಅಲ್ಲಿ ತಿಂಡಿ ಖಾಲಿಯಾಗಿತ್ತು. ೨೮೦ ಪ್ಲೇಟ್ ತಿಂಡಿ ಖಾಲಿಯಾಗಿದೆ ಎಂದು ಕ್ಯಾಂಟೀನ್ ವ್ಯವಸ್ಥಾಪಕ ಹೇಳಿದಾಗ ಮಾಧ್ಯಮಮಿತ್ರರಿಗೆ ತಿಂಡಿಕೊಡಿಸೋಣ ಎಂದುಕೊಂಡಿದ್ದೆ ಆದರೆ ಖಾಲಿಯಾಗಿದೆಯಲ್ಲ ಎಂದು ಹಾಸ್ಯದ ದಾಟಿಯಲ್ಲಿ ಹೇಳಿದರು. ನಂತರ ದಾಸರಹಳ್ಳಿಯ ೧೫ನೇ ವಾರ್ಡಿನ ಇಂದಿರಾ ಕಾಂಟೀನ್ ಗೆ ತೆರಳಿ ತಿಂಡಿ ಲಭ್ಯವಿದ್ದು, ಉಪ್ಪಿಟ್ಟು ಮತ್ತು ಕೇಸರಿಬಾತ್ ತಿಂದು ಆಹಾರದ ಗುಣಮಟ್ಟದ ಬಗ್ಗೆ ತಿಂಡಿ ತಿನ್ನುತ್ತಿದ್ದ ನಾಗರಿಕರನ್ನು ಮಾತನಾಡಿಸಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕ್ಯಾಂಟೀನ್ ವ್ಯಕ್ತಿ ತಿಂಡಿಗೆ ೫ ರೂ.ಗೆ ಬದಲು ೧೦ ರೂ. ಪಡೆದಿದ್ದನ್ನು ಗಮನಿಸಿದ ಉಪಮುಖ್ಯಮಂತ್ರಿಗಳು ಅದನ್ನು ಪ್ರಶ್ನಿಸಿದರು. ಆಗ ಅವರು ೨ ಪ್ಲೇಟ್ ತೆಗೆದುಕೊಂಡಿದ್ದಾರೆ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ಇಂದಿರಾಕ್ಯಾಂಟೀನ್‌ನ ಕುಂದು ಕೊರತೆ ದೂರು ಸಲ್ಲಿಸುವ ಸಹಾಯವಾಣಿಗೆ ಕರೆ ಮಾಡಿಸಿದಾಗ ಅಲ್ಲೂ ದುರಸ್ಥಿಯಲ್ಲಿರುವುದರ ಮಾಹಿತಿ ಪಡೆದು ತಕ್ಷಣ ಸರಿಪಡಿಸಲು ಸೂಚಣೆ ನೀಡಿದರು. ಹಾಗೆಯೇ ಪ್ರತಿವಾರ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಆಹಾರ ಗುಣಮಟ್ಟ ಪರಿಶೀಲಿಸುವಂತೆ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ
ಇಂದಿರಾ ಕ್ಯಾಂಟೀನ್ ಭೇಟಿ ನಂತರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾಗಡಿ ರಸ್ತೆಯ ಸೀಗೆಹಳ್ಳಿ, ಕನ್ನಹಳ್ಳಿ, ದೊಡ್ಡಬಿದರಕಲ್ಲುಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೀಗೆಹಳ್ಳಿ ಘನತ್ಯಾಜ್ಯ ಸಂಸ್ಕಾರಣ ಘಟಕದಲ್ಲಿ ೧೨೦ ಮೆಟ್ರಿಕ್ ಟನ್ ಹಸಿ ತ್ಯಾಜ್ಯ ಸಾಮರ್ಥ್ಯವಿದ್ದು, ಈ ಸಂಸ್ಕರಣಾ ಘಟಕವನ್ನು ಕೂಡಲೇ ಆರಂಭಿಸಲು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್ಲೆಂದರಲ್ಲಿ ಕಸ ಸುರಿದವರಿಗೆ ಅಂತಹವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವುದಾಗಿಯೂ ಹೇಳಿದರು.
ಬೆಂಗಳೂರಿನ ಅಭಿವೃದ್ಧಿಗೆ ಸಂಪನ್ಮೂಲ ಕ್ರೂಢೀಕರಿಸಿ ಅಭಿವೃದ್ಧಿ ಮಾಡುತ್ತೇವೆ. ಆಸ್ತಿ ತೆರಿಗೆ ವಂಚನೆಗೆ ವಂನೆಗೂ ಕಡಿವಾಣ ಹಾಕಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯಕ್ತ ತುಷಾರ್‌ಗಿರಿನಾಥ್, ವಿಶೇಷ ಆಯುಕ್ತರಾದ ಹರೀಶ್‌ಕುಮಾರ್, ಜಂಟಿ ಆಯುಕ್ತ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.