’ಇಂದಿರಾ ಕೊಡುಗೆ ‘ಭೂಸುಧಾರಣೆ’ ಜನತೆ ಬದುಕು ಹಸನು’

ಕಬಕದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ ಜನ್ಮದಿನಾಚರಣೆ

ಪುತ್ತೂರು, ನ.೨೧- ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿಯವರ ಭೂಸುಧಾರಣಾ ಕಾಯ್ದೆಯ ಫಲವಾಗಿ ಇಂದು ಕೋಟ್ಯಾಂತರ ಮಂದಿ ಸ್ವತಂತ್ರವಾಗಿ ಬದುಕು ಕಂಡುಕೊಂಡಿದ್ದಾರೆ. ಸ್ವಂತ ಹಿಡುವಳಿದಾರರಾಗಿದ್ದಾರೆ. ಇಂದಿರಾ ಕೊಡುಗೆಯಿಂದ ಜನತೆಯ ಬದುಕು ಹಸನಾಗಿದೆ ಎಂದು ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಯವರು ಹೇಳಿದರು.
ಅವರು ರೈತ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಶುಕ್ರವಾರ ಕಬಕ ಜಂಕ್ಷನ್‌ನಲ್ಲಿ ನಡೆದ ಇಂದಿರಾಗಾಂಧಿ ಜನ್ಮದಿನದ ಅಂಗವಾಗಿ ನಡೆದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿರಾಗಾಂಧಿ ಅವರು ಅಂದು ತೆಗೆದುಕೊಂಡ ದಿಟ್ಟ ನಿರ್ಧಾರದಿಂದಾಗಿ ಈಗ ಅಧಿಕಾರ ವಿಕೇಂದ್ರೀಕರಣವಾಗಿದೆ. ಅವರು ಭೂ ಮಸೂದೆ ಎಂಬ ಕಾನೂನು ಜಾರಿಗೆ ತರದೇ ಇರುತ್ತಿದ್ದಲ್ಲಿ ಇಂದಿಗೂ ದೇಶದ ಬಹುಪಾಲು ಭೂಮಿ ಉಳ್ಳವರ ಪಾಲಾಗುತ್ತಿತ್ತು, ಜನ ಇಂದಿಗೂ ಜೀತದಾಳುಗಳಾಗಿ ಬದುಕಬೇಕಿತ್ತು.ಈ ಹಿನ್ನಲೆಯಲ್ಲಿ ದೇಶದ ಪ್ರತೀಯೊಬ್ಬ ನಾಗಕರಿನೂ ಇಂದಿರಾಗಾಂಧಿಯವನ್ನು ಸ್ಮರಣೆ ಮಾಡುತ್ತಲೇ ಇರಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ಮಾತನಾಡಿ ಇಂದಿರಾಗಾಂಧಿಯವರ ಭೂಮಸೂದೆ ಕಾಯ್ದೆಯ ಫಲದಿಂದ ಕರಾವಳಿ ಜಿಲ್ಲೆಯ ಜನ ಸ್ವಾಭಿಮಾನದಿಂದ ಬದುಕುಕಟ್ಟಿಕೊಂಡಿದ್ದಾರೆ. ನಾವು ಇಂದು ಕನಿಷ್ಠ ಭೂಮಿಯನ್ನಾದರೂ ಹೊಂದಿ ಸ್ವಾಬಿಮಾನದ ಜೀವನ ನಡೆಸುತ್ತಿದ್ದರೆ ಅದಕ್ಕೆ ಇಂದಿರಾ ಗಾಂಧಿ ಕಾರಣರಾಗಿದ್ದಾರೆ. ಅಂದು ಅವರು ಮಾಡಿದ ದಿಟ್ಟ ಕಾನೂನು ದೇಶದ ಜನತೆಯ ಕಣ್ಣೀರೊರೆಸಿದೆ. ಅದರ ಫಲ ಇಂದಿಗೂ ಅವರ ಕುಟುಂಬ ಅನುಭವಿಸುತ್ತಿದೆ. ಆದರೆ ಅದೇ ಕುಟುಂಬದ ತಲೆಮಾರು ಇಂದಿರಾ ಗಾಂಧಿಯನ್ನು ಮರೆತಿದೆ ಎಂದು ಹೇಳಿದರು.
ಭೂಮಸೂದೆಯ ಫಲಾನುಭವಿ ಹಿರಿಯರಾದ ಬಪ್ಪಳಿಗೆ ಕಿಟ್ಟಣ್ಣ ಗೌಡ, ಪ್ರಗತಿಪರ ಕೃಷಿಕ ರಾಜೇಶ್ ಬಾಳೆಕಲ್ಲು, ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮಹಮ್ಮದ್, ಕಿಸಾನ್ ಘಟಕದ ಜಿಲ್ಲಾ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಮಾತನಾಡಿದರು.
ಜಿಪಂ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸಾಬಾ ಕಬಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೈತ ಜಾಗೃತಿ ಕಾರ್ಯಕ್ರಮಕ್ಕೆ ಸಹಕರಿಸಿದ ಜಗನ್ಮೋಹನ್ ರೈ ಕೆದಂಬಾಡಿ, ಉದಯಕುಮಾರ್ ರೈ ಸೂರಂಬೈಲು, ಅಬೂಬಕ್ಕರ್ ಶಾಫಿ ಕಂಚಿಲ್ಕುಕುಂಜ ಅವರನ್ನು ಮಾಜಿ ಸಚಿವ ರಮಾನಾಥ ರೈ ಗೌರವಿಸಿದರು.
ರೈತ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ನವೀನ್ ರೈ ಚೆಲ್ಯಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂಸ ಕಬಕ ವಂದಿಸಿದರು. ಪ್ರಸಾದ್ ಯಾದವ್ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು.