ಇಂದಿರಾಗಾಂಧಿ ತತ್ವ ಅಳವಡಿಸಿಕೊಳ್ಳಲು ಕರೆ

ಬೆಂಗಳೂರು, ನ.೨೦ : ತುಳಿತಕ್ಕೆ ಒಳಗಾದ ಎಲ್ಲಾ ಜನಾಂಗದವರಿಗೆ ಶಿಕ್ಷಣ, ಸಾಮಾಜಿಕ ನ್ಯಾಯ ಉಳುವವನಿಗೆ ಭೂಮಿ ಸೇರಿದಂತೆ ೨೦ ಅಂಶಗಳ ಕಾರ್ಯಕ್ರಮವನ್ನು ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತರುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ ತತ್ವ, ಆದರ್ಶ, ಚಿಂತನೆಗಳು ಎಲ್ಲಾ ಕಾಲಕ್ಕೆ ಪ್ರಸ್ತುತ ಎಂದು ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜ್‌ಕುಮಾರ್ ಹೇಳಿದರು.

ಬೆಂಗಳೂರು ನಗರ ಉತ್ತರ ಜಿಲ್ಲಾ ಕಾಂಗ್ರೆಸ್ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಚಿಕ್ಕೇಗೌಡನಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಜಯಂತಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ ವಿಶ್ವದೆಲ್ಲೆಡೆ ಜನರ ವಿಶ್ವಾಸಗೆದ್ದ ಏಕೈಕ ಮಹಿಳಾ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ ಜನ್ಮದಿನಾಚರಣೆ ಒಂದು ದಿನಕ್ಕೆ ಸೀಮಿತಗೊಳಿಸದೆ ನಿತ್ಯ ನಿರಂತರವಾಗಿ ಸ್ಮರಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಪಿ.ನಾಗರಾಜು, ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಯೊಂದು ಜನಾಂಗಕ್ಕೂ ಉಚಿತ ವಸತಿ, ನಿವೇಶನ, ಬರಗಾಲ ಸಮಯದಲ್ಲಿ ವಿದೇಶಗಳಿಂದ ದಿನಸಿ ಪದಾರ್ಥ ತಂದು ಎಲ್ಲರಿಗೂ ವಿತರಿಸುವ ಮೂಲಕ ಬಡವರ ಹಸಿವು ನೀಗಿಸಿ ಸಂಕಷ್ಟದಲ್ಲಿದ್ದ ಬಡವರ ಕಣ್ಣೊರೆಸಿದ ದಿಟ್ಟ ಮಹಿಳೆ, ಪಾಕಿಸ್ತಾನ ವಿರುದ್ಧ ಯುದ್ಧ ಸಾರಿ, ವಿರೋಧಿಗಳನ್ನು ಹಿಮ್ಮೆಟ್ಟಿಸಿದ ವೀರಮಹಿಳೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಮೃತ್‌ಗೌಡ, ರೇವಣ್ಣಸಿದ್ದಯ್ಯ ಜಿ.ಪಂ. ಮಾಜಿ ಅಧ್ಯಕ್ಷ ಎಂ. ಸದಾನಂದ ಮಾತನಾಡಿದರು.