ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯಯುತ ಶಿಕ್ಷಣ ಅತ್ಯಾವಶ್ಯಕ : ಸುರೇಶ ಜತ್ತಿ

ಸಂಜೆವಾಣಿ ವಾರ್ತೆ
ವಿಜಯಪುರ, ಮಾ.28 :ಶಿಕ್ಷಣವು ಮಕ್ಕಳಲ್ಲಿ ದೇಶಭಕ್ತಿ, ಶಿಸ್ತು, ಸಂಯಮ, ಸಂಸ್ಕಾರ ಮತ್ತು ಮಾನವ ಶಕ್ತಿಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಮಾಜದಲ್ಲಿ ಜವಾಬ್ದಾರಿತ ವ್ಯಕ್ತಿಯನ್ನಾಗಿ ರೂಪಿಸಬೇಕಿದೆ ಎಂದು ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸೆಸ್ ನ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ಹೇಳಿದರು.
ನಗರದ ಅಥಣಿ ರಸ್ತೆಯಲ್ಲಿ ಇರುವ ಘೇವರಚಂದ ಕಾಲೋನಿಯ ಯುರೋ ಕಿಡ್ಸ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ಮಕ್ಕಳಿಗೆ ಮೌಲ್ಯ ಶಿಕ್ಷಣದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಶಿಕ್ಷಣದ ಮಹತ್ವವನ್ನು ಅರಿತಿರುವ ನಾವುಗಳು ಮಕ್ಕಳ ಶಿಕ್ಷಣಕ್ಕಾಗಿ ಕೋಟಿಗಟ್ಟಲೆ ದುಡ್ಡು ಸುರಿಯಲು ಸಿದ್ಧರಿದ್ದೇವೆ. ಶಿಕ್ಷಣದಿಂದ ಮಾತ್ರ ನಾಗರಿಕ ಸಮಾಜ ಕಟ್ಟಬಹುದು. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯಯುತ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಅದಕ್ಕಾಗಿ ಶಿಕ್ಷಣದ ಜೊತೆಗೆ ಮಕ್ಕಳಿಗೆ ಮೌಲ್ಯಯುತ ಶಿಕ್ಷಣವನ್ನು ಬೋಧಿಸಿದಾಗ ಮಗು ಯಶಸ್ವಿ ಹಾಗೂ ಸಂಸ್ಕಾರಯುತ ವ್ಯಕ್ತಿಯಾಗಿ ಸಮಾಜದಲ್ಲಿ ಜನ ಮೆಚ್ಚುವಂತೆ ಬದುಕುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಯುರೋ ಕಿಡ್ಸ್ ಶಾಲೆಯ ನಿರ್ದೇಶಕ ಪ್ರತಿಷ್ಠಿತ ಶಿವಾಜಿ ಬ್ಯಾಂಕಿನ ವ್ಯವಸ್ಥಾಪಕ ಸಂಜಯ ಜಾಧವ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎನ್ನುವಂತೆ, ಇಂದಿನ ಮಕ್ಕಳೇ ನಾಳೆಯ ನಾಡಿನ ನಾಗರಿಕರು , ಮಗುವಿನ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರಷ್ಟೇ ಪಾತ್ರ ಪಾಲಕರದ್ದು ಇದೆ. ಕೇವಲ ಪರೀಕ್ಷೆಯಲ್ಲಿ ತೆಗೆದುಕೊಂಡ ಅಂಕಗಳ ಮೇಲೆ ಶೈಕ್ಷಣಿಕ ಪ್ರಗತಿಯನ್ನು ಅಳೆಯದೇ, ಕಲಿಸಿದ ವಿಷಯ ಮಗುವಿಗೆ ಮನದಟ್ಟಾಗುವಂತೆ ಪಾಠ ಬೋಧಿಸಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ರಾಜಕುಮಾರ ಲೇಔಟ್ ನ ಅಧ್ಯಕ್ಷ ಮಾಲಿಪಾಟೀಲ ಅವರು ಮಾತನಾಡಿ, ಮಗುವಿಗೆ ಉತ್ತಮ ಶಿಕ್ಷಣ ಕೊಡುವುದಕ್ಕಾಗಿ ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸಬೇಕೆ ವಿನಃ ಕೇವಲ ವ್ಯವಹಾರ, ವ್ಯಾಪಾರ ದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಲಾಭ ನಷ್ಟದ ವಿಚಾರ ಮಾಡದೇ ಪ್ರಾಮಾಣಿಕತೆಯಿಂದ ಪ್ರತಿಯೊಬ್ಬ ಮಗುವಿನ ಕಡೆಗೆ ಗಮನಹರಿಸಿ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಬೇಕು ಎಂದರು.
ರಾಜಕುಮಾರ ಲೇಔಟ್ ನ ಅಧ್ಯಕ್ಷ ಜಿ. ಬಿ. ದೊಡ್ಡಿಮನಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಿ ಪೆÇ್ರೀತ್ಸಾಹಿಸಲಾಯಿತು. ನಂತರ ಭಿನ್ನ, ವಿಭಿನ್ನ ಗೀತೆಗಳಿಗೆ ಪುಟ್ಟ ಮಕ್ಕಳು ಮನಮೋಹಕವಾಗಿ ಹೆಜ್ಜೆ ಹಾಕಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದು ವಿಶೇಷವಾಗಿತ್ತು.ಕಾರ್ಯಕ್ರಮವನ್ನು ಉಪನ್ಯಾಸಕ ಮಂಜುನಾಥ ಜುನಗೊಂಡ ನಿರೂಪಿಸಿ,ವಂದಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಸತೀಶ ಶಿಂತ್ರೆ, ಡಾ. ಪ್ರಮೋದ ಪಾಟೀಲ, ಬಸು ಬಿರಾದಾರ, ಮಾರುತಿ ಘೋರ್ಪಡೆ, ಮುಖ್ಯ ಶಿಕ್ಷಕಿ ಅಕ್ಷತಾ ಅಲಬಳ್ಳಿ, ಶಿಕ್ಷಕ, ಶಿಕ್ಷಕಿಯರು, ಪಾಲಕರು ಮುದ್ದು ಮಕ್ಕಳು ಭಾಗವಹಿಸಿದ್ದರು.