ಇಂದಿನ ಯುವಪೀಳಿಗೆಗೂ ಡಾ.ರಾಜ್ ಆದರ್ಶವಾಗಿದ್ದಾರೆ

ಹಗರಿಬೊಮ್ಮನಹಳ್ಳಿ:ಏ.25 ಡಾ.ರಾಜ್‍ಕುಮಾರ್ ಎಂದರೆ ಇಂದು, ಮುಂದು, ಎಂದೆಂದೂ ಕನ್ನಡಿಗರ ಆರಾಧ್ಯ ದೈವವಾಗಿದ್ದಾರೆ ಎಂದು ಕ.ರ.ವೇ(ನಾರಾಯಣಗೌಡ ಬಣ) ತಾಲ್ಲೂಕು ಅಧ್ಯóಕ್ಷ ಎನ್.ಎಮ್.ಗೌಸ್ ಹೇಳಿದರು.
ಪಟ್ಟಣದ ತಮ್ಮ ಕಛೇರಿ ಬಳಿ ವರನಟ ಡಾ.ರಾಜ್‍ಕುಮಾರ್‍ರವರ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಿ ಅವರು ಮಾತನಾಡಿ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಟರಾಗಿ ಅಭಿನಯಿಸಿದ ಏಕೈಕ ನಟನೆಂಬ ಹೆಗ್ಗಳಿಕೆಗೆ ಡಾ.ರಾಜ್ ಪಾತ್ರರಾಗಿದ್ದರು. ಶರೀರ ಮತ್ತು ಶಾರೀರ ಎರಡರಿಂದಲೂ ಅವರು ನಾಡಿನ ಮನೆಮಾತಾಗಿದ್ದರು. ನಾಡು, ನುಡಿ, ನೆಲ, ಜಲಕ್ಕಾಗಿ ಅವರು ಹೋರಾಟಕ್ಕೆ ಧುಮುಕಿದರೆಂದರೆ ಇಡೀ ರಾಜ್ಯವೇ ಅವರ ಹಿಂದೆ ನಡೆಯುತ್ತಿತ್ತು. ಅಂತಹ ಮಹಾನ್ ವ್ಯಕಿಗಳು ಅಪರೂಪಕ್ಕೆಂಬಂತೆ ನಮ್ಮ ನಾಡಿನ ಮಣ್ಣಿನಲ್ಲಿ ಜನಿಸುತ್ತಾರೆ ಎಂಬುದಕ್ಕೆ ಡಾ.ರಾಜ್ ಸಾಕ್ಷಿಯಾಗಿದ್ದಾರೆ.
ಆಡು ಮುಟ್ಟದ ಸೊಪ್ಪಿಲ್ಲ, ರಾಜ್ ಮಾಡದ ಪಾತ್ರಗಳಿಲ್ಲ ಎಂಬಂತೆ ಅವರು ಅಭಿನಯಿಸಿದ ಎಲ್ಲಾ ಚಿತ್ರಗಳಲ್ಲೂ ಪಾತ್ರದ ಪರಕಾಯ ಪ್ರವೇಶವಾಗಿಬಿಡುತ್ತಿದ್ದರು ಹಾಗಾಗಿಯೇ ನಾಡಿನ ಪ್ರತಿಯೊಂದು ಕುಟುಂಬದ ಮನೆಮಗನಂತೆ ಎಲ್ಲರೂ ಅವರನ್ನು ಆರಾಧಿಸುತ್ತಾರೆ. ಅಭಿಮಾನಿಗಳನ್ನೇ ದೇವರೆಂದು ಕರೆದ ಮೇರು ವ್ಯಕ್ತಿತ್ವ ಅವರದ್ದಾಗಿತ್ತು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲಾ ಸಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಡಗಿ ಬಸಣ್ಣ, ಕೊಟ್ರೇಶ್, ಶ್ರೀಧರ್, ವೀರೇಶ್ ಮತ್ತಿತರಿದ್ದರು.